ಗೋಣಿಕೊಪ್ಪ ವರದಿ. ಮೇ ೬ : ಹಾತೂರು ಸರ್ಕಾರಿ ಪ್ರೌಢಶಾಲೆಯ ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಮೈದಾನದಲ್ಲಿ ಬಿರುವಾಸ್ ಗೋಣಿಕೊಪ್ಪ ಸಂಘಟನೆ ವತಿಯಿಂದ ಪೂಜಾರಿ ಪ್ರೀಮಿಯರ್ ಲೀಗ್ ಟೂರ್ನಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಬಿ. ಎಸ್. ಚಂದ್ರಶೇಖರ್ ಟೂರ್ನಿ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ಹೆಚ್ಚು ತೊಡಗಿಕೊಳ್ಳುವುದರಿಂದ ಒಗ್ಗಟ್ಟು ಹೆಚ್ಚಾಗುತ್ತದೆ. ಮೊದಲ ವರ್ಷದ ಟೂರ್ನಿಯಾಗಿರುವುದರಿಂದ ಎಲ್ಲರ ಪ್ರೋತ್ಸಾಹ ಯುವ ಸಮೂಹಕ್ಕೆ ನೀಡಬೇಕಿದೆ. ಶಿಕ್ಷಣದೊಂದಿಗೆ ಎಲ್ಲ ಕ್ಷೇತ್ರದಲ್ಲಿ ನಮ್ಮ ಜನಾಂಗ ಮುಂದೆ ಬರಬೇಕು. ರಾಜಕೀಯವಾಗಿ ಹೆಚ್ಚು ತೊಡಗಿಕೊಂಡು ಜನಾಂಗದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದು ಸಲಹೆ ನೀಡಿದರು.

ಪೂಜಾರಿ, ಬಿರುವ, ಬಿಲ್ಲವ ಹೀಗೆ ಮೂರು ಹೆಸರಿನಲ್ಲಿ ನಾವು ಗುರುತಿಸಿಕೊಂಡಿದ್ದೇವೆ. ದಕ್ಷಿಣ ಕನ್ನಡ ಭಾಗದಲ್ಲಿ ದೇವರುಗಳ ಪೂಜೆಯಲ್ಲಿ ನಾವು ತೊಡಗಿರುವುದರಿಂದ ಪೂಜಾರಿ ಎಂಬ ಜಾತಿ ನಾಮಾಂಕಿತ ನಮಗಿದೆ. ಬಿಲ್ಲು ವಿದ್ಯೆಯಲ್ಲಿ ಪ್ರವೀಣರು ಎಂಬುವುದನ್ನು ಬಿಲ್ಲವ ಎಂದು ಕರೆಯಲಾಗುತ್ತಿದೆ. ಆಯುರ್ವೇದದಲ್ಲಿ ನಿಪುಣತೆ ಹಿನ್ನೆಲೆ ಕೂಡ ನಮಗಿದೆ. ಹೀಗೆ ನಮ್ಮನ್ನು ಬಿರುವಾ ಎಂದು ಕೂಡ ಕರೆಯಲಾಗುತ್ತದೆ. ಭತ್ತ ಬೆಳೆ ಹೆಚ್ಚು ಬೆಳೆಯುವ ಜನಾಂಗ ನಮ್ಮದು, ಸೇಂದಿ ಇಳಿಸುವ ಕಾಯಕ ಕೂಡ ನಮ್ಮ ಜನಾಂಗದ ವಿಶೇಷತೆ ಎಂದು ಚಂದ್ರಶೇಖರ್ ಹೇಳಿದರು.

ಈ ಸಂದರ್ಭ ಬಿರುವಾಸ್ ಗೋಣಿಕೊಪ್ಪ ಸಂಘಟನೆ ಅಧ್ಯಕ್ಷ ಬಿ. ಆರ್. ರಂಜಿತ್‌ಕುಮಾರ್, ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಪೂಜಾರಿ ಪ್ರೀಮಿಯರ್ ಲೀಗ್ ಕಾರ್ಯಾಧ್ಯಕ್ಷೆ ರೇಖಾ ಬಾಬು ಪೂಜಾರಿ, ಹಾತೂರು ಗ್ರಾ. ಪಂ. ಅಧ್ಯಕ್ಷ ಕುಪ್ಪಂಡ ಗಿರಿ ಪೂವಣ್ಣ, ತಾಲೂಕು ಬಿಲ್ಲವ ಸಂಘ ಕಾರ್ಯದರ್ಶಿ ಬಿ. ಎಸ್. ಜನಾರ್ದನ ಪೂಜಾರಿ, ಉದ್ಯಮಿ ಪ್ರಕಾಶ್ ರಾಮಯ್ಯ ಪೂಜಾರಿ, ನವೀನ್ ಬಂಗೇರ, ಅನಿಲ್ ಸೀನಪ್ಪ, ಹಿರಿಯರಾದ ಗಣೇಶ್ ಇದ್ದರು.

ಜನಾಂಗದ ಸಾಂಸ್ಕೃತಿಕ ನೆಲೆಗಟ್ಟಿನ ಪರಿಕರ, ಗುರುಗಳ ಪೂಜೆಯೊಂದಿಗೆ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ನಾರಾಯಣಗುರು, ದೇವಿ ಬೈದತಿ, ಕೋಟೆ ಚೆನ್ನಯ್ಯ ಅವರ ಭಾವಚಿತ್ರ ಇಟ್ಟು ಪುಷ್ಪಾರ್ಚನೆ ಸಲ್ಲಿಸಲಾಯಿತು. ಜನಾಂಗದ ಕಳಸ ಪೂಜೆ ಆಚರಣೆಯಂತೆ ತೆಂಗಿನ ಹೂ ಮತ್ತು ಭತ್ತ ಇಟ್ಟು ಪೂಜಿಸಲಾಯಿತು. ಜನಾಂಗಕ್ಕೆ ಸೇಂದಿ ಇಳಿಸುವ ಕಾಯಕದ ಮೂಲ ಇರುವುದರಿಂದ ಸೇಂದಿ ಇಳಿಸುವ ಮೂರ್ತೆಕತ್ತಿಯನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಪೂಜೆ ಮಾಡಲಾಯಿತು.

ಫಲಿತಾಂಶ

ಮಡಿಕೇರಿ ರಾಯಲ್ ಪೂಜಾರಿ ತಂಡವು ಅಮ್ಮತ್ತಿ ಚಂದನ್ ಬ್ರದರ್ಸ್ ತಂಡವನ್ನು ೨೨ ರನ್‌ಗಳಿಂದ ಮಣಿಸಿತು. ನಿಗದಿತ ೫ ಓವರ್‌ಗಳಲ್ಲಿ ಮಡಿಕೇರಿ ೪ ವಿಕೆಟ್ ನಷ್ಟಕ್ಕೆ ೬೬ ರನ್ ಪೇರಿಸಿತು. ಅಮ್ಮತ್ತಿ ೫ ವಿಕೆಟ್ ಕಳೆದುಕೊಂಡು ಕೇವಲ ೪೪ ರನ್ ಸೇರಿಸಿ ಸೋಲೊಪ್ಪಿಕೊಂಡಿತು.

ಅಮ್ಮತ್ತಿ ಬಿಲ್ಲವ ಟೈಗರ್ ತಂಡಕ್ಕೆ ಪೂಜಾರಿ ಹಿಟ್ರ‍್ಸ್ ವಿರುದ್ಧ ೬ ವಿಕೆಟ್ ಜಯ ದೊರೆಯಿತು. ಅಮ್ಮತ್ತಿ ೩ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿತು. ಪೂಜಾರಿ ಹಿಟ್ಟರ್ಸ್ ೨ ವಿಕೆಟ್ ನಷ್ಟಕ್ಕೆ ೫೮ ರನ್ ಮಾತ್ರ ಗಳಿಸಿತು.

ಮಕ್ಕಂದೂರು ಟೈಟನ್ಸ್ ತಂಡವು ಕೊಡಗು ಗ್ರೀನ್ ಕೂರ್ಗ್ ತಂಡವನ್ನು ೧೯ ರನ್‌ಗಳಿಂದ ಸೋಲಿಸಿತು. ಮಕ್ಕಂದೂರು ೨ ವಿಕೆಟ್ ಕಳೆದುಕೊಂಡು ೬೮ ರನ್ ಪೇರಿಸಿತು. ಗ್ರೀನ್ ತಂಡವು ೩ ವಿಕೆಟ್‌ಗಳಿಗೆ ೪೯ ರನ್ ದಾಖಲಿಸಿತು.

ಪೂಜಾರೀಸ್ ಪ್ರೆöÊಡ್ ತಂಡಕ್ಕೆ ರಾಯಲ್ ಪೂಜಾರಿ ಮಡಿಕೇರಿ ವಿರುದ್ಧ ೧೨ ರನ್ ಜಯ ದೊರೆಯಿತು. ಪೂಜಾರೀಸ್ ೩ ವಿಕೆಟ್ ಕಳೆದುಕೊಂಡು ೪೩ ರನ್ ಗಳಿಸಿತು. ಮಡಿಕೇರಿ ೯ ವಿಕೆಟ್ ನಷ್ಟಕ್ಕೆ ೩೧ ರನ್ ಗಳಿಸಿತು.

ಪೂಜಾರಿ ಹಿಟ್ಟರ್ಸ್ ತಂಡವು ಬಿಲ್ಲವ ಪ್ಯಾಂಥರ್ಸ್ ತಂಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಪ್ಯಾಂಥರ್ಸ್ ವಿಕೆಟ್ ನಷ್ಟವಿಲ್ಲದೆ ೫೮ ರನ್ ದಾಖಲಿಸಿತು. ಹಿಟ್ಟರ್ಸ್ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಗ್ರೀನ್ ಕೂರ್ಗ್ ತಂಡವು ಅಮ್ಮತ್ತಿ ಬಿಲ್ಲವ ವಾರಿಯರ್ಸ್ ತಂಡದ ವಿರುದ್ಧ ೩೩ ರನ್ ಗೆಲುವು ಪಡೆಯಿತು. ಗ್ರೀನ್ ೩ ವಿಕೆಟ್ ನಷ್ಟಕ್ಕೆ ೬೨ ರನ್ ದಾಖಲಿಸಿತು. ಅಮ್ಮತ್ತಿ ೩ ವಿಕೆಟ್ ಕಳೆದುಕೊಂಡು ೨೯ ರನ್ ಮಾತ್ರ ಗಳಿಸಿತು.

ಪೂಜಾರೀಸ್ ಪ್ರೆöÊಡ್ ತಂಡಕ್ಕೆ ಚಂದನ್ ಬ್ರದರ್ಸ್ ವಿರುದ್ಧ ೮ ವಿಕೆಟ್ ಗೆಲುವು ದಕ್ಕಿತು. ಚಂದನ್ ತಂಡ ೩ ವಿಕೆಟ್ ನಷ್ಟಕ್ಕೆ ೪೮ ರನ್ ಗಳಿಸಿತು. ಪ್ರೆöÊಡ್ ತಂಡವು ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.