ಮಡಿಕೇರಿ, ಮೇ ೬: ದೇಶದಲ್ಲಿ ಅಡುಗೆ ಎಣ್ಣೆಯಿಂದ ಹಿಡಿದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮೊದಲೆಲ್ಲ ಈರುಳ್ಳಿ, ಟೊಮೇಟೋ ಬೆಲೆ ಕೆಲವೊಮ್ಮೆ ದುಬಾರಿ ಆಗುತಿತ್ತು. ಇದೀಗ ಔಷಧೀಯ ಗುಣವುಳ್ಳ ನಿಂಬೆ ಹಣ್ಣಿನ ಬೆಲೆ ಏರುಮುಖ ವಾಗಿ ಅಚ್ಚರಿ ಹುಟ್ಟಿಸಿದೆ. ಈ ಹಿಂದೆ ೧-೨ ರೂಪಾಯಿಗಳಿಗೆ ಒಂದು ನಿಂಬೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಒಂದು ನಿಂಬೆ ಹಣ್ಣಿನ ಬೆಲೆ ೮ ರಿಂದ ೧೦ ರೂಪಾಯಿ ತಲುಪಿದ್ದು, ಬೇಸಿಗೆ ಕಾಲದಲ್ಲಿ ಜನ ಮತ್ತಷ್ಟು ಬೆವರುವಂತಾಗಿದೆ. ಬೇಸಿಗೆಯಲ್ಲಿ ನಿಂಬೆ ಹಣ್ಣನ್ನು ಹೆಚ್ಚಾಗಿ ಶರಬತ್ತು ಮಾಡಲು ಬಳಸುವುದರಿಂದಲೂ, ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿರುವುದರಿAದಲೂ ಪ್ರಸ್ತುತ ಬಹು ಬೇಡಿಕೆಯಿಂದಾಗಿ ನಿಂಬೆ ಬೆಲೆ ಗಗನಮುಖಿ ಆಗಿದೆ.

ಕೊಡಗಿನಲ್ಲಿ ನಿಂಬೆಯನ್ನು ಅತ್ಯಲ್ಪ ಪ್ರಮಾಣದಲ್ಲಿ ಬೆಳೆಯ ಲಾಗುತ್ತಿದೆ. ಕಾಫಿ ತೋಟಗಳಲ್ಲಿ ಇದನ್ನು ಮಿಶ್ರ ಬೆಳೆ ಆಗಿ ಬೆಳೆಯ ಲಾಗುತಿದ್ದು, ದರ ಏರಿಕೆಯ ಲಾಭ ಇಲ್ಲಿನ ಬೆಳೆಗಾರರಿಗೆ ಸಿಗುತ್ತಿಲ್ಲ. ಸೋಮವಾರಪೇಟೆ ತಾಲೂಕಿನಲ್ಲಿ ನಿಂಬೆಯನ್ನು ಹೆಚ್ಚಾಗಿ ಬೆಳೆಯ ಲಾಗುತ್ತಿದ್ದು, ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಚಕ್ಕೇರ ಪ್ರಮೋದ್ ಅವರ ಪ್ರಕಾರ ಜಿಲ್ಲೆಯಲ್ಲಿ ೩೦-೩೫ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಿಂಬೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಇರುವ ನಿಂಬೆ ಬೆಳೆಗಾರರ ಸಂಖ್ಯೆಯೂ ೨೦೦ರ ಒಳಗಿದೆ. ಉತ್ಪಾದನೆಯೂ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಹೇಳುತ್ತಾರೆ.

ಇಂದಿನ ಮಾರುಕಟ್ಟೆ ಕುರಿತು ಪ್ರತಿಕ್ರಿಯಿಸಿದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಯೂರಿನ ಪ್ರಗತಿಪರ ನಿಂಬೆ ಬೆಳೆಗಾರ ಕುಶಾಲಪ್ಪ ಅವರು ತಾವು ಪ್ರತೀ ವಾರವೂ ನಿಂಬೆ ಹಣ್ಣನ್ನು ಸೋಮವಾರಪೇಟೆ, ಶನಿವಾರಸಂತೆ ಮತ್ತು ಅರಕಲಗೂಡು ಸಂತೆಯಲ್ಲಿ ಮಾರಾಟ ಮಾಡುವುದಾಗಿ ತಿಳಿಸಿದರು. ತಮ್ಮ ೮ ಎಕರೆ ಜಮೀನಿನಲ್ಲಿ ಮಿಶ್ರಬೆಳೆ ಆಗಿ ನಿಂಬೆ ಬೆಳೆಯುತ್ತಿರುವ ಇವರು ಸೋಮವಾರ ಸಿಮೆಂಟ್ ಚೀಲವೊಂದಕ್ಕೆ ೩೨೦೦ ರೂಪಾಯಿನಂತೆ ಮಾರಾಟ ಮಾಡಿದ್ದಾಗಿ ತಿಳಿಸಿದರು. ಒಂದು ಚೀಲದಲ್ಲಿ ೬೦೦-೭೦೦ ನಿಂಬೆ ಹಣ್ಣುಗಳಿದ್ದು ಮೂರು ತಿಂಗಳ ಹಿಂದೆ ಚೀಲವೊಂದಕ್ಕೆ ೪೦೦-೫೦೦ ರೂಪಾಯಿ ಸಿಗುತಿತ್ತು ಎಂದರು. ವರ್ಷವಿಡೀ ಫಸಲು ಸಿಗುವ ನಿಂಬೆಗೆ ರೋಗ ಭಾದೆಯೂ ಇದ್ದು ೧೦-೧೨ ವರ್ಷಗಳ ನಂತರ ಗಿಡ ಕಡಿದು ಹೊಸ ಗಿಡ ಹಾಕುವುದಾಗಿ ತಿಳಿಸಿದರು. ಗಿಡ ನೆಟ್ಟ ಮೂರು ವರ್ಷಗಳಿಗೆ ಫಸಲು ಕೊಡುವ ನಿಂಬೆಗೆ ತಂಪಾದ ಹವಾಗುಣ ಮತ್ತು ಕೆಂಪು ಮಣ್ಣಿನಲ್ಲಿ ಚೆನ್ನಾಗಿ ಇಳುವರಿ ನೀಡುತ್ತದೆ ಎಂದರು.

ಕೊಡಗಿನಲ್ಲಿ ನಿಂಬೆ ಬೆಳೆಗಾರರಿಗೆ ಸರಾಸರಿ ನಿಂಬೆ ಹಣ್ಣಿಗೆ ೪ ರೂಪಾಯಿ ಧಾರಣೆ ದೊರೆಯುತಿದ್ದರೂ ಗ್ರಾಹಕರಿಗೆ ಮಾತ್ರ ೮-೧೦ ರೂಪಾಯಿಗಳವರೆಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಅತೀ ಹೆಚ್ಚು ನಿಂಬೆ ಬೆಳೆಯುವ ಪ್ರದೇಶವಾದ ವಿಜಯಪುರ ಜಿಲ್ಲೆಯಲ್ಲಿ ಸೋಮವಾರ ಒಂದು ಮೂಟೆ ಉತ್ತಮ ಗುಣಮಟ್ಟದ ನಿಂಬೆಗೆ ೧೦ ಸಾವಿರ ರೂಪಾಯಿಗೆ ಮಾರಾಟವಾಗಿದೆ.

ವಿಜಯಪುರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ೧೦೦೦ ನಿಂಬೆ ಹಣ್ಣು ಇರುವ ಮೂಟೆಗೆ ೮ ಸಾವಿರ ರೂಪಾಯಿಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಅತ್ಯಧಿಕ ನಿಂಬೆ ಬೆಳೆಯುವ ಪ್ರದೇಶದಲ್ಲಿ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗುತ್ತಿರುವಾಗ ಕೊಡಗಿನಲ್ಲಿ ಮಾತ್ರ ಬೆಳೆಗಾರರಿಗೆ ಸೂಕ್ತ ಬೆಲೆ ದೊರೆಯದಿರುವುದು ವಿಷಾದನೀಯ.

ರಾಜ್ಯ ತೋಟಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ೪೦ ಸಾವಿರ ನಿಂಬೆ ಬೆಳೆಗಾರರು ಇದ್ದಾರೆ. ಅದರಲ್ಲಿ ವಿಜಯಪುರ ಜಿಲ್ಲೆಯಯವರೇ ೨೫,೦೦೦ ರೈತರಿದ್ದಾರೆ. ರಾಜ್ಯದಲ್ಲಿ ೨೧,೦೦೦ ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗುತ್ತಿದ್ದರೆ, ಇದರಲ್ಲಿ ವಿಜಯಪುರ ಜಿಲ್ಲೆಯಲ್ಲೇ ೧೬,೦೦೦ ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಿದೆ. ಸದ್ಯ ಇಡೀ ರಾಜ್ಯದಲ್ಲಿ ನಿಂಬೆ ಬೇಡಿಕೆಗಿಂತ ಪೂರೈಕೆ ಕಡಿಮೆಯಿರೋ ಕಾರಣ ಬೆಲೆಯಲ್ಲಿ ಏರಿಕೆಯಾಗಿದೆ. ಜೊತೆಗೆ ಈ ಹಿಂದೆ ಹವಾಮಾನ ವೈಪರಿತ್ಯ, ಅಕಾಲಿಕ ಮಳೆ ಹಾಗೂ ರೋಗಬಾಧೆಗೂ ನಿಂಬೆ ಈಡಾಗಿದ್ದರಿಂದ ಈಗ ಇಳುವರಿ ಕಡಿಮೆಯಾಗಿದೆ.

ಕಳೆದ ವರ್ಷ ನಿಂಬೆ ಬೆಳೆಗಾರರು ಕಣ್ಣೀರು ಹಾಕುವ ಪರಿಸ್ಥಿತಿ ಇತ್ತು. ಅಕಾಲಿಕ ಮಳೆ, ಕೊರೊನಾ ಲಾಕ್‌ಡೌನ್ ದಿಂದಾಗ ರಸ್ತೆಯ ಮೇಲೆ ನಿಂಬೆ ಹಣ್ಣು ಚೆಲ್ಲಿದ್ದರು. ತೋಟದಿಂದ ಮಾರುಕಟ್ಟೆಗೆ ನಿಂಬೆ ತಂದರೆ ಅದರ ಬಾಡಿಗೆ ಹಣ ಸಹ ಬರೋದಿಲ್ಲ ಎಂದು ಎಷ್ಟೋ ರೈತರು ನಿಂಬೆಯನ್ನು ಬಿಸಾಡಿದ್ದರು.

ಆದರೆ ಈ ಸಲ ಪರಿಸ್ಥಿತಿ ಭಿನ್ನವಾಗಿದ್ದು, ಐದು ಚೀಲ ನಿಂಬೆ ಹಣ್ಣನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಆ ಹಣದಿಂದ ಒಂದು ಗ್ರಾಂ ಬಂಗಾರ ತೆಗೆದು ಕೊಂಡು ಮನೆಗೆ ಹೋಗುತ್ತಿದ್ದಾರೆ. ಬೆಳೆಗಾರರ ಪಾಲಿಗೆ ಬೆಲೆ ಹೆಚ್ಚಳ ವರವಾದರೆ ಗ್ರಾಹಕರಿಗೆ ಮತ್ತಷ್ಟು ‘ಹುಳಿ’ಯಂತಾಗಿದೆ.

- ಕೋವರ್ ಕೊಲ್ಲಿ ಇಂದ್ರೇಶ್