ಮಡಿಕೇರಿ, ಮೇ ೬: ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಕೊಡಗು ಜಿಲ್ಲಾ ಘಟಕ ವತಿಯಿಂದ ೧೩೧ನೇ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ದಲಿತ ಜಾಗೃತಿ ಸಮಾವೇಶ ತಾ. ೨೯ ರಂದು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್, ದಿವಾಕರ್ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಇದಕ್ಕೆ ಎಲ್ಲರ ಸಹಾಕರ ಮುಖ್ಯವಾಗಿರುತ್ತದೆ. ದಲಿತರು ರಾಜಕೀಯವಾಗಿ ಹಿಂದುಳಿದ ಹಿನ್ನೆಲೆ ನಾವು ಮುಖ್ಯವಾಹಿನಿಗೆ ಬರಲಾಗುತ್ತಿಲ್ಲ. ಅಧಿಕಾರದಿಂದ ದೂರವಾಗುತ್ತಿದ್ದೇವೆ. ರಾಜಕಾರಣಿಗಳ ತೊಂದರೆಯಿAದ ದಲಿತ ಅಧಿಕಾರಿಗಳು ಸಮರ್ಪಕವಾಗಿ ಅಧಿಕಾರ ಚಲಾಯಿಸಲಾಗುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯ ೫ ತಾಲೂಕುಗಳಿದ್ದು, ಶಾಸಕರ ಸಂಖ್ಯೆಯನ್ನು ಹೆಚ್ಚು ಮಾಡಿ ಎಸ್ಸಿ, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲು ಕ್ಷೇತ್ರ ನೀಡುವಂತೆ ಒತ್ತಾಯಿಸಿದರು. ಜಿಲ್ಲೆಯಲ್ಲಿ ನಿರ್ಣಯಕ ಮತದಾರರು ದಲಿತರಾಗಿದ್ದಾರೆ. ಆದರೆ, ಯಾವುದೇ ಸೌಲಭ್ಯ ದೊರಕದಿರುವುದು ವಿಪರ್ಯಾಸ. ತಾ. ೨೯ ರಂದು ನಡೆಯುವ ಜಾಗೃತಿ ಸಮಾವೇಶಕ್ಕೆ ಹೋರಾಟಗಾರ ದ್ವಾರಕನಾಥ್, ನಟರಾದ ಪ್ರಕಾಶ್ ರಾಜ್, ಚೇತನ್, ಜ್ಞಾನ ಪ್ರಕಾಶ್ ಸ್ವಾಮೀಜಿ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಮೈಸೂರು-ಕೊಡಗು ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಮಾತನಾಡಿ, ಹಲವರು ನಿವೇಶನವಿಲ್ಲದೆ ಲೈನ್ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಸರಕಾರ ಸ್ಪಂದಿಸಿ ವಸತಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖ ಗಣೇಶ್ ಮಾತನಾಡಿ, ಭೂಮಿ ಉಳ್ಳವರ ಪಾಲಾಗುತ್ತಿರುವ ಹಿನ್ನೆಲೆ ನಿವೇಶನ ರಹಿತರಿಗೆ ದೊರೆಯುತ್ತಿಲ್ಲ. ಹೀನಾಯ ಸ್ಥಿತಿಯಲ್ಲಿರುವ ದಲಿತರ ಸಮಸ್ಯೆಯನ್ನು ಸರಕಾರ ಪರಿಹರಿಸಬೇಕು. ಅಂಬೇಡ್ಕರ್ ಭವನ ಹಾಗೂ ಪುತ್ಥಳಿ ನಿರ್ಮಾಣಕ್ಕೆ ಕ್ರಮವಹಿಸುವಂತೆ ಆಗ್ರಹಿಸಿದರು.