ನಾಪೋಕ್ಲು, ಮೇ ೬ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಮಟ್ಟದಿಂದಲೇ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ಅವರು ನಾಪೋಕ್ಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ನ ೧೦೭ನೇ ಸಂಸ್ಥಾಪನಾ ದಿನಾಚರಣೆ ಸಭೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆಯೊಂದಿಗೆ ಉಪ ಭಾಷೆಗಳನ್ನು ಬೆಳೆಸಬೇಕು. ಇತರ ಭಾಷೆಗಳನ್ನು ಗೌರವಿಸಬೇಕು ಎಂದು ಕರೆ ನೀಡಿದರು. ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಲಾ ೨೦೦ ರಂತೆ ಜಿಲ್ಲೆಯಲ್ಲಿ ೫೦ ಸಾವಿರ ಜನರನ್ನು ನೋಂದಣಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು

ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹಮ್ಮದ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್‌ಗೆ ಯುವ ಜನರನ್ನು ಸದಸ್ಯರನ್ನಾಗಿ ಮಾಡಬೇಕು ಮಕ್ಕಳಿಗೆ ಪ್ರಾಥಮಿಕ ಹಂತದಿAದಲ್ಲೇ ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕೆಂದರು.

ನಾಪೋಕ್ಲು ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಅವನಿಜ ಸೋಮಯ್ಯ, ಕಸಾಪದ ಮಡಿಕೇರಿ ತಾಲೂಕು ಅಧ್ಯಕ್ಷ ನವೀನ್ ಅಂಬೇಕಲ್ಲು, ನಾಪೋಕ್ಲು ಹೋಬಳಿ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ನಾಪೋಕ್ಲು ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಕಾವೇರಿ ಪ್ರಕಾಶ್ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ವಹಿಸಿ ಮಾತನಾಡಿದರು. ಮಮತ ಮತ್ತು ಶ್ರೀರಕ್ಷ ಪ್ರಾರ್ಥಿಸಿದರು. ನೆರವಂಡ ಉಮೇಶ್ ಸ್ವಾಗತಿಸಿ ಮುನೀರ್ ಅಹಮ್ಮದ್ ನಿರೂಪಿಸಿದರು. ಕಾರ್ಯದರ್ಶಿ ಪಿ.ವಿ. ಪ್ರಭಾಕರ್, ವಂದಿಸಿದರು.

ಸಿದ್ದಾಪುರ: ಸಿದ್ದಾಪುರದ ಗ್ರಾ.ಪಂ. ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ. ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಾಲಿಬೆಟ್ಟದ ಚೆಷೈರ್ ಹೋಮ್ಸ್ ವಿಶೇಷಚೇತನರ ಶಾಲಾ ಮುಖ್ಯ ಶಿಕ್ಷಕ ಎಸ್.ಸಿ. ಶಿವರಾಜ್ ಮಾತನಾಡಿ, ಕನ್ನಡ ಭಾಷೆಯು ಪ್ರಾಚೀನ ಕಾಲದ ಭಾಷೆಯಾಗಿದ್ದು, ಈ ಭಾಷೆಗಳನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿರುವ ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಕ.ಸಾ.ಪ. ಸಂಘಟನೆಯು ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರತಿಯೊಬ್ಬರು ಕನ್ನಡ ಪತ್ರಿಕೆಗಳನ್ನು ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮುಖ್ಯ ಭಾಷಣಗಾರರಾದ ಸಿದ್ದಾಪುರ ಬಿ.ಜಿ.ಎಸ್. ಕಾಲೇಜಿನ ಉಪನ್ಯಾಸಕಿ ಎಂ.ಯು. ಉಮಾರಾಣಿ ಮಾತನಾಡಿ, ಕರ್ನಾಟಕದ ಏಕೀಕರಣಕ್ಕೆ ಕ.ಸಾ.ಪ.ದ ಪಾತ್ರ ಮುಖ್ಯವಾಗಿತ್ತು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ ಹಾಗೂ ಸಾಹಿತ್ಯ ಉಳಿಯಲು ಮಹತ್ವ ನೀಡಿದೆ. ಗಡಿನಾಡಿನಲ್ಲಿ ಮಾತೃ ಭಾಷೆಗಳು ಇದ್ದರೂ ಕೂಡ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಮಟ್ಟದಲ್ಲಿ ಸಂಘಟನೆಗಳು ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.