ಮಡಿಕೇರಿ, ಮೇ ೭: ಬೇಸಿಗೆಯ ಈ ಸಂದರ್ಭದಲ್ಲಿ ಮನೆಯಲ್ಲಿ ಕಿರಿಕಿರಿ ಮಾಡುತ್ತಾ ಕಾಲಕಳೆಯುವ ಚಿಣ್ಣರಿಗೆ ಇದೊಂದು ವಿಶಿಷ್ಟ ರೀತಿಯ ಸಂಭ್ರಮ... ತಮ್ಮೆಲ್ಲಾ ಚೇಷ್ಟೆ - ಕುಚೇಷ್ಟೆಗಳನ್ನು ಇವರು ಬಿಟ್ಟಿದ್ದರು. ಬದಲಿಗೆ ಭಾರೀ ಆಸಕ್ತಿಯೊಂದಿಗೆ ವಿವಿಧ ಮಾದರಿಗಳ ತಯಾರಿಕೆ, ಚಿತ್ರಕಲೆ, ಕಸದಿಂದ ರಸ ತಯಾರಿಕೆ, ಯೋಗಾಭ್ಯಾಸ, ಪ್ರವಾಸದಂತಹ ಚಟುವಟಿಕೆಗಳ ಮೂಲಕ ಈ ಪುಟಾಣಿಗಳು ಒಂದಷ್ಟು ದಿನಗಳ ಕಾಲ ಹೊಸ ಲೋಕದಲ್ಲಿದ್ದರು.
ಮಡಿಕೇರಿ ತಾಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಕಾಂತೂರು - ಮೂರ್ನಾಡು ಗ್ರಾಮ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮೂರ್ನಾಡುವಿನಲ್ಲಿ ಪುಟ್ಟ ಮಕ್ಕಳಿಗೆ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಚಿತ್ರಣವಿದು... ೫೦ ಮಕ್ಕಳಿಗೆ ಎಂದಿದ್ದರೂ ಸುಮಾರು ೮೨ ಮಕ್ಕಳು ಶಿಬಿರದಲ್ಲಿ ಸೇರ್ಪಡೆಗೊಂಡಿದ್ದರು. ಇಲಾಖೆಗಳ ಪ್ರಯತ್ನಕ್ಕೆ ಪೋಷಕರ, ದಾನಿಗಳ ಸಹಕಾರ ಇದಕ್ಕೆ ಕಾರಣವಾಗಿತ್ತು.
ಮೂರ್ನಾಡು ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಈ ಶಿಬಿರದಲ್ಲಿ ಹಲವಷ್ಟು ಹೊಸತನ್ನು ಕಲಿತರು... ಬಲಮುರಿ ದೇವಸ್ಥಾನದ ಪ್ರವಾಸವೂ ಮಕ್ಕಳಿಗೆ ಮುದ ನೀಡಿತು. ಎಂಟು ದಿನಗಳ ಕಾಲ ನಡೆದ ಈ ಶಿಬಿರದ ಸಮಾರೋಪ ಸಮಾರಂಭವನ್ನು ಸಂಘಟಕರು ಮತ್ತೊಂದು ಅರ್ಥಗರ್ಭಿತವಾದ ಹೊಸತನ ದೊಂದಿಗೆ ಹಮ್ಮಿಕೊಂಡಿದ್ದರು.
೮ ದಿನಗಳ ಕಾಲ ನಡೆದ ಶಿಬಿರದಲ್ಲಿ ಮಾಡಿದ ಸಾಧನೆಗಳು - ಅರಿತ ಚಟುವಟಿಕೆಗಳ ಪ್ರದರ್ಶನ ಒಂದೆಡೆಯಾದರೆ, ತಾಯಿಯ ಮಹತ್ವವನ್ನು ಮಕ್ಕಳಿಗೆ ಪರಿಚಯಿಸಲು ತಾಯಂದಿರ ದಿನದ ಅಂಗವಾಗಿ ಅವರವರ ತಾಯಂದಿರ ಪಾದಪೂಜೆಯನ್ನು ಮಕ್ಕಳಿಂದ ಮಾಡಿಸಲಾಯಿತು. ಡಾ|| ಮಹಾಬಲೇಶ್ವರ ಗಾಂವ್ಕರ್ ಸ್ವಾಮಿಗಳ ಮಾರ್ಗದರ್ಶನದಲ್ಲಿ ಪಾದಪೂಜೆ ನೆರವೇರಿತು. ಮಕ್ಕಳು ಇದರಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡರೆ ತಾಯಂದಿರು ತಮ್ಮ ಮಕ್ಕಳನ್ನು ಹೃದಯತುಂಬಿ ಆಶೀರ್ವದಿಸಿದರಲ್ಲದೆ, ಕಾರ್ಯಕ್ರಮ ಆಯೋಜಕರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ವಿಶೇಷವಾಗಿತ್ತು. ಎಲ್ಲಾ ಮಕ್ಕಳಿಗೂ ಕಿರುಕಾಣಿಕೆ ಹಾಗೂ ಪ್ರಶಸ್ತಿಯನ್ನು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಕುಮಾರಸ್ವಾಮಿ, ಮಹೇಶ್ಕುಮಾರ್, ವರ್ಷಿಣಿ ಕೈ ಜೋಡಿಸಿದ್ದರು. ನಿನ್ನೆ ನಡೆದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಚಂದ್ರಶೇಖರ್, ಸದಸ್ಯರಾದ ಲತಾ, ಪಿಡಿಓ ಚಂದ್ರಮೌಳಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಂಧತಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮೇಪಾಡಂಡ ಸವಿತ ಕೀರ್ತನ್, ಅಂಗನವಾಡಿ ಕಾರ್ಯಕರ್ತೆ ಯರಾದ ಜಯಂತಿ, ಚೈತ್ರ, ಭವ್ಯ, ಪ್ರಮೀಳ, ಭವಾನಿ, ಉಮಾವತಿ, ಸಹಾಯಕಿಯರಾದ ಜಯಂತಿ, ಪ್ರೇಮ, ಸರಸ್ವತಿ ಅವರುಗಳು ಶ್ರಮಿಸಿದ್ದರು.