ಕೂಡಿಗೆ, ಮೇ ೭: ಸೀಗೆಹೊಸೂರು ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಹುದುಗೂರು ಮತ್ತು ಬಾಣವಾರ ಮೀಸಲು ಅರಣ್ಯ ಪ್ರದೇಶಗಳ ಕಡೆಯಿಂದ ಒಂದು ಮರಿ ಆನೆ ಸೇರಿದಂತೆ ಆರು ಕಾಡಾನೆಗಳ ಹಿಂಡು ಸೀಗೆಹೊಸೂರು ಮತ್ತು ಹುಣಸೆಪಾರೆ ವ್ಯಾಪ್ತಿಯಲ್ಲಿ ರೈತರ ಜಮೀನಿಗೆ ದಾಳಿ ಮಾಡಿ ಇದೀಗ ಬಿತ್ತನೆ ಮಾಡಿದ ಶುಂಠಿ ಮತ್ತು ಸಿಹಿ ಗೆಣಸು ಬಾಳೆಗಿಡಗಳನ್ನು ತುಳಿದು, ತಿಂದು ನಷ್ಟ ಪಡಿಸಿವೆ.
ಹತ್ತಕ್ಕೂ ಹೆಚ್ಚು ರೈತರುಗಳ ಜಮೀನಿಗೆ ದಾಳಿ ಮಾಡಿ ಬೆಳೆದ ಬೆಳೆ ಮತ್ತು ನೀರಾವರಿ ವ್ಯವಸ್ಥೆಗೆ ಅಳವಡಿಕೆ ಮಾಡಿದ ಪೈಪ್ಗಳನ್ನು ತುಳಿದು ಹಾನಿಪಡಿಸಿವೆ. ಸ್ಥಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡುವ ಭರವಸೆ ನೀಡಿದ್ದಾರೆ.