ಕುಶಾಲನಗರ, ಮೇ ೬ : ಕನ್ನಡ ಭಾಷೆ ಈ ನಾಡಿನ ಜನರ ಹೃದಯದ ಭಾಷೆಯಾಗಬೇಕು ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಹೇಳಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಚಿಕ್ಕ ಅಳುವಾರದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಭಾಷೆಯ ಗಟ್ಟಿತನ ಹಾಗೂ ಸೊಗಡು ಉಳಿದಿರುವುದೇ ಹಳ್ಳಿಗಳ ಜನರ ಬಾಯಲ್ಲಿ ಎಂದು ನುಡಿದರು.

ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಬರವಣಿಗೆ ಹಾಗೂ ಪುಸ್ತಕಗಳ ಓದಲು ಬಳಸುವ ಮೂಲಕ ಜ್ಞಾನವಂತರಾಗಬೇಕೆAದು ಕರೆಕೊಟ್ಟರು.

ಕನ್ನಡ ಭಾಷೆಯ ಬಳಕೆ ಹಾಗೂ ಅಸ್ಮಿತೆಯ ಬಗ್ಗೆ ಬೆಳಕು ಚೆಲ್ಲಿದ ಮಡಿಕೇರಿ ಆಕಾಶವಾಣಿಯ ಕೃಷಿ ವಿಭಾಗದ ಮುಖ್ಯಸ್ಥರಾದ ಡಾ.ವಿಜಯ ಅಂಗಡಿ, ಕನ್ನಡ ಭಾಷೆಯ ಅಳಿವು - ಉಳಿವಿನ ಬಗ್ಗೆ ಮಾತಾಡಿ ಬೇರೆಯವರ ಬಗ್ಗೆ ಬೆರಳು ತೋರಿಸುವ ನಾವುಗಳು ಮೊದಲು ಪರಸ್ಪರ ಸ್ವ ವಿಮರ್ಶೆ ಮಾಡಿಕೊಳ್ಳಬೇಕು. ಕನ್ನಡ ಪದಗಳನ್ನು ಹೆಚ್ಚಾಗಿ ಬಳಸುವ ಮೂಲಕ ನಾವು ಬದಲಾದರೆ ಇಡೀ ಸಮಾಜ ಬದಲಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಶಾಲಾ ಕಾಲೇಜುಗಳ ಮಕ್ಕಳ ಬಳಿ ಪರಿಷತ್ತಿನ ಚಟುವಟಿಕೆಗಳನ್ನು ಕೊಂಡೊಯ್ಯುವ ಮೂಲಕ ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆ ಮೂಡಿಸಲಾಗುವುದು ಎಂದರು.

ಇದೇ ಸಂದರ್ಭ ಕುಶಾಲನಗರದ ಕಲಾವಿದ ಬಿ.ಸಿ.ಶಂಕರಯ್ಯ ಅವರನ್ನು ಸನ್ಮಾನಿಸಲಾಯಿತು.

ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಚಂದ್ರಶೇಖರಯ್ಯ ಮಾತನಾಡಿದರು. ಪರಿಸರ ಹೋರಾಟಗಾರ ಟಿ.ಜಿ. ಪ್ರೇಮಕುಮಾರ್ ಸಾಹಿತ್ಯ ಹಾಗೂ ಪರಿಸರ ಉಳಿವಿನ ಕುರಿತಾದ ಪ್ರಮಾಣವಚನ ಬೋಧಿಸಿದರು.

ವಿದ್ಯಾರ್ಥಿನಿ ಸಂವೇದಿತಾ ಹಾಗೂ ಬಿ.ಸಿ.ಶಂಕರಯ್ಯ ಗೀತಾಗಾಯನ ನಡೆಸಿಕೊಟ್ಟರು. ಅರ್ಪಿತಾ ವಂದಿಸಿದರು. ಕಸಾಪ ತಾಲೂಕು ಕೋಶಾಧಿಕಾರಿ ಕೆ.ವಿ.ಉಮೇಶ್, ಚುಟುಕು ಸಾಹಿತಿ ಹಾ. ತಿ. ಜಯಪ್ರಕಾಶ್, ಮೇಲ್ಮನೆ ಕಾಳಪ್ಪ ಇದ್ದರು. ಉಪನ್ಯಾಸಕ ಜಮೀರ್ ಅಹಮದ್ ನಿರೂಪಿಸಿದರೆ, ಉಪನ್ಯಾಸಕಿ ಮಮತಾ ಸ್ವಾಗತಿಸಿದರು.