'
ಸೋಮವಾರಪೇಟೆ, ಮೇ ೬: ಹತ್ತು ಹೆಚ್.ಪಿ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಕೊಟ್ಟಿದ್ದ ಭರವಸೆಯನ್ನು ಈಡೇರಿಸಬೇಕು. ಚುನಾವಣಾ ಗಿಮಿಕ್ ಮಾಡಿದರೆ, ಕಾಫಿ ಬೆಳೆಯುವ ನಾಲ್ಕು ಜಿಲ್ಲೆಗಳ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಸಫಾಲಿ ಸಭಾಂಗಣದಲ್ಲಿ ಆಯೋಜಿಸಿದ್ದ ರೈತರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಫಿ ಬೆಳೆಗಾರರ ೧೦ಎಚ್.ಪಿ.ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸರ್ಕಾರ ನೀಡಲಿದೆ ಎಂದು ಹೇಳಿದ್ದರು. ಆದರೆ ಈಗ ಅಧಿಕಾರಿಗಳು ಉಚಿತ ವಿದ್ಯುತ್ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಉಚಿತ ವಿದ್ಯುತ್ ನೀಡದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಸ್ವತಂತ್ರ ಬಂದು ೭೪ವರ್ಷ ಕಳೆದರೂ ರೈತರ ಆತ್ಮಹತ್ಯೆಗಳು ಜಾಸ್ತಿಯಾಗುತ್ತಿರುವುದು ದುರಂತ. ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟç ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಕಾಲಿಕ ಮಳೆ, ಪ್ರಕೃತಿ ವಿಕೋಪ, ಹವಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸಣ್ಣಬೆಳೆಗಾರರು ಸಾಲಗಾರರಾಗಿದ್ದಾರೆ. ಸರ್ಕಾರ ರೈತರ, ಕಾಫಿ ಬೆಳೆಗಾರರ ಬೇಡಿಕೆ ಈಡೇರಿಸದಿದ್ದರೆ ದುರಂತ ಸಂಭವಿಸಲಿದೆ ಎಂದು ಎಚ್ಚರಿಸಿದರು. ಕಾಫಿ ವಿದೇಶಿ ವಿನಿಮಯದಿಂದ ಸಾವಿರಾರು ಕೋಟಿ ರೂ. ತೆರಿಗೆ ಹಣ ಸರ್ಕಾರಗಳ ಬೊಕ್ಕಸ ಸೇರುತ್ತಿದೆ. ಎಲ್‌ಟಿ೪ಸಿ ಯಲ್ಲಿ ವಿದ್ಯುತ್ ಬಳಕೆದಾರರಿಗೆ ಕೇವಲ ೨೫ಕೋಟಿ ರೂ.ಗಳಷ್ಟು ಹಣವನ್ನು ಸಬ್ಸಿಡಿ ನೀಡಿದರೆ, ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬಹುದು ಎಂದರು.
ಕಳೆದ ಹಲವಾರು ವರ್ಷಗಳಿಂದ ಉಚಿತ ವಿದ್ಯುತ್‌ಗಾಗಿ ಬೇಡಿಕೆ ಮತ್ತು ಹೋರಾಟ ನಡೆಯುತ್ತಿದೆ. ಕಾಫಿ ಬೆಳೆಗಾರರ ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಮಾಡುವುದರೊಂದಿಗೆ, ಉಚಿತ ವಿದ್ಯುತ್ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಾಫಿ ಪ್ಲಾಂಟರ್ ಲೇಬಲ್‌ನ್ನು ಕಿತ್ತು ಬಿಸಾಕಬೇಕು. ಹೋರಾಟ ಮಾಡದಿದ್ದರೆ ಯಾವ ಸೌಲಭ್ಯಗಳು ಸಿಗುವುದಿಲ್ಲ. ಸಾಲಗಾರರಾಗಿ ನಂತರ, ಬಂಡವಾಳಶಾಹಿಗಳಿಗೆ ಕಾಫಿ ತೋಟ ಮಾರಾಟ ಮಾಡಿ, ಬೀದಿಗೆ ಬರುವಂತ ಪರಿಸ್ಥಿತಿ ಬರಲೂಬಹುದು. ಹೋರಾಟದ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜು ಬೋಪಯ್ಯ, ಉಪಾಧ್ಯಕ್ಷ ಶಂಕರಪ್ಪ, ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ಸಂಚಾಲಕ ಮಂದಣ್ಣ ಇದ್ದರು. ರೈತ ಸಂಘವನ್ನು ಸೇರ್ಪಡೆಗೊಂಡ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.