ಕುಶಾಲನಗರ, ಮೇ.೬: ರಾಜ್ಯದಾದ್ಯಂತ ಮಸೀದಿಗಳಲ್ಲಿ ಆಜಾನ್ ಹೆಸರಿನಲ್ಲಿ ಶಬ್ದ ಮಾಲಿನ್ಯ ನಿರ್ಬಂಧಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಮತ್ತು ರಾಜ್ಯದ ವಿವಿಧ ಸಂಘಟನೆಗಳು ೯ರಂದು ಸುಮಾರು ಸಾವಿರಕ್ಕೂ ಅಧಿಕ ದೇವಾಲಯಗಳಲ್ಲಿ ಮೈಕ್ ಅಳವಡಿಸಿ ಸುಪ್ರಭಾತ, ಹನುಮಾನ್ ಚಾಲೀಸ್ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮಸೇನೆಯ ಸಂಚಾಲಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಅವರು ಕುಶಾಲನಗರದ ಸಮೀಪ ಮಾದಾಪಟ್ಟಣ ಗ್ರಾಮದಲ್ಲಿ ಶ್ರೀ ಕಾಶಿ ವಿಶ್ವನಾಥ ಮತ್ತು ಶ್ರೀ ಜೋಡಿ ಬಸವೇಶ್ವರ ಸ್ವಾಮಿ ದೇವಾಲಯ ಪ್ರತಿಷ್ಠಾಪನಾ ಮತ್ತು ಕುಂಬಾಭಿಷೇಕ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲೆಡೆ ಶಬ್ದ ಮಾಲಿನ್ಯ ಅಧಿಕಗೊಂಡಿದ್ದು ಆಸ್ಪತ್ರೆ, ಶಾಲಾ ವಠಾರ, ನ್ಯಾಯಾಲಯ ಸೇರಿದಂತೆ ನಿಶ್ಯಬ್ಧ ವಲಯಗಳಲ್ಲಿ ದಿನನಿತ್ಯ ಕಿರಿಕಿರಿ ಉಂಟಾಗುತ್ತದೆ. ಆದರೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶಕ್ಕೂ ಸರ್ಕಾರ ಬೆಲೆ ಕೊಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜೆಡಿಎಸ್-ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷಗಳು ಹಿಂದೂ ವಿರೋಧಿಗಳಾಗಿದ್ದು ಇದುವರೆಗೆ ಹಿಂದೂಗಳ ರಕ್ಷಣೆ ಪ್ರಕ್ರಿಯೆ ಮಾಡಿಲ್ಲ, ಕಾಂಗ್ರೆಸ್ ಕಳೆದ ಆರು ದಶಕಗಳಲ್ಲಿ ಭಯೋತ್ಪಾದನೆಯನ್ನು ಬೆಳೆಸಿದೆ. ಪ್ರಸಕ್ತ ಬಿಜೆಪಿ ಸರ್ಕಾರ ಕೆಲವು ಬದಲಾವಣೆ ತಂದಿದ್ದು ಹಿಂದುತ್ವಕಾಗಿ ಕೆಲವು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗಿದೆ. ಹಿಂದೂಗಳ ರಕ್ಷಣೆ ಮಾಡುವ ಪ್ರಕ್ರಿಯೆ ಆಗಬೇಕಿದೆ. ರಾಜ್ಯ ಸರ್ಕಾರ ಉತ್ತರಪ್ರದೇಶದ ಮುಖ್ಯಮಂತ್ರಿಗಳ ಮಾರ್ಗವನ್ನು ಅನುಸರಿಸಬೇಕಾಗಿದೆ ಎಂದು ಆಗ್ರಹಿಸಿದರು.
ಸರ್ಕಾರ ಮೌನ ವಹಿಸಿದಲ್ಲಿ ಹಿಂದೂ ಸಮಾಜ ಸಿಡಿದೇಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಮಠಾಧೀಶರಿಗೆ ಅಥವಾ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆಯಾದರೆ ಅವರಿಗೆ ರಕ್ಷಣೆ ಮಾಡುವ ಕೆಲಸವನ್ನು ಹಿಂದೂಪರ ಸಂಘಟನೆಗಳು ಮಾಡಲು ಶತಸಿದ್ಧ ಎಂದು ಮುತಾಲಿಕ್ ಹೇಳಿದರು.
ಈ ಸಂದರ್ಭ ಶ್ರೀರಾಮ ಸೇನೆ ಮತ್ತು ಹಿಂದೂಪರ ಸಂಘಟನೆಗಳ ಪ್ರಮುಖರಾದ ಗಣೇಶ್, ಅಶೋಕ ರೈ, ಎಂ.ಎಸ್.ಸುಬ್ರಮಣಿ, ನರಸಿಂಹ, ರಾಜೀವ, ಸಂಜಯ್ ಮತ್ತಿತರರಿದ್ದರು.