ಸುಂಟಿಕೊಪ್ಪ, ಮೇ ೬: ಸಮೀಪದ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರು ಗ್ರಾಮದಲ್ಲಿ ಯುವತಿಯೋರ್ವಳನ್ನು ಅಡ್ಡಗಟ್ಟಿ ಎಳೆದಾಡಿದ ಎನ್ನಲಾದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಏಪ್ರಿಲ್ ೨೭ರಂದು ಬುಧವಾರ ತೊಂಡೂರು ಗ್ರಾಮದ ಯುವತಿಯೋರ್ವಳು ಕುಶಾಲನಗರಕ್ಕೆ ಕೆಲಸಕ್ಕೆ ತೆರಳಿ ಮನೆಗೆ ವಾಪಸು ಬರುವ ಸಂದರ್ಭ ಸಂಜೆ ೫.೫೦ರ ಸಮಯದಲ್ಲಿ ಅದೇ ಗ್ರಾಮದ ಕಬೀರ್ ಎಂಬಾತ ಯುವತಿಯ ಕೈಯಲ್ಲಿದ್ದ ಮೊಬೈಲ್ ಹಾಗೂ ಹಣವನ್ನು ಕಸಿದುಕೊಂಡು ಯುವತಿಯನ್ನು ತೋಟದೊಳಗೆ ಎಳೆದಾಡಿ ಬೀಳಿಸಿದ ಎಂದು ಯುವತಿ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದಳು. ಸ್ಥಳಕ್ಕೆ ಡಿವೈಎಸ್ಪಿ ಶೈಲೇಂದ್ರ ಕುಶಾಲನಗರ ವೃತ್ತನಿರೀಕ್ಷಕ ಮಹೇಶ್ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ವಿರುದ್ಧ ಸೆಕ್ಷನ್ ೩೪೧, ೩೫೪ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಆದರೆ ಕಳೆದ ಒಂಭತ್ತು ದಿನಗಳಿಂದ ಕಾಣೆಯಾದ ಆರೋಪಿ ಕಬೀರ್ ತಾ. ೫ ರಂದು ಸಂಜೆ ತೊಂಡೂರಿನ ತನ್ನ ಮನೆಗೆ ಆಗಮಿಸಿ ವಿಷ ಸೇವಿಸಿದ್ದಾನೆ. ಇದನ್ನು ತಿಳಿದ ಗ್ರಾಮಸ್ಥರು ಆರೋಪಿಯನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಆನೆಕಾಡು ಸಮೀಪ ಅಸುನೀಗಿದ್ದಾನೆ.