ಮಡಿಕೇರಿ ಮೇ ೬ : ಆಡಳಿತದಲ್ಲಿ ಕೊಡವ ಭಾಷೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ತಾ. ೯ ರಂದು ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ರಾಜ್ಯಗಳ ಮರುಸಂಘಟನೆ ಕಾಯಿದೆ ೧೯೫೬ ರಲ್ಲಿ ತೆಗೆದುಕೊಂಡ ನಿರ್ಧಾರದಂತೆÀ ೩ ನೇ ಭಾಷೆಯಾಗಿ ಕೊಡವ ಭಾಷೆಯನ್ನು ಪರಿಗಣಿಸುವ ಅಗತ್ಯವಿದೆ. ಸಂವಿಧಾನದ ೩೪೭, ೩೫೦, ೩೫೦ಎ ಮತ್ತು ೩೫೦ಬಿ ವಿಧಿಗಳಡಿಯಲ್ಲಿ ಕೊಡವರ ಮಾತೃಭಾಷೆಯಾಗಿರುವ ಕೊಡವ ಭಾಷೆಯನ್ನು ಆಡಳಿತದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದೇ ಏ.೩೦ ರಂದು ದೆಹಲಿಯಲ್ಲಿ ನಡೆದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ರಾಜ್ಯಗಳ ಹೈಕೋರ್ಟ್ಗಳ ಮುಖ್ಯ ನ್ಯಾಯಾಧೀಶರುಗಳ ಸಭೆಯಲ್ಲಿ ದೇಶದ ನ್ಯಾಯಾಲಯಗಳು ಮತ್ತು ಇತರ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕೆಂದು ಪ್ರಧಾನಿ ನರೇಂದ್ರಮೋದಿ ಹಾಗೂ ಸಿಜೆ ಎನ್.ವಿ.ರಮಣ ಅವರು ಕರೆ ನೀಡಿದ್ದಾರೆ.

ಇದು ಆಡಳಿತದಲ್ಲಿ ಕೊಡವ ಭಾಷೆಯನ್ನು ಅಳವಡಿಸಬೇಕೆನ್ನುವ ಸಿಎನ್‌ಸಿ ಬೇಡಿಕೆಗೆ ಪೂರಕವಾದ ಕರೆಯಾಗಿದೆ. ಕೊಡವ ಭಾಷೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ಸೋಮವಾರ ಬೆಳಗ್ಗೆ ೧೦.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲಾಗುವುದು. ನಂತರ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ನಾಚಪ್ಪ ಹೇಳಿದ್ದಾರೆ.