ಮಡಿಕೇರಿ, ಮೇ ೬: ಮಡಿಕೇರಿ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ತಾ. ೮ ರಿಂದ ೧೧ ರವರೆಗೆ ಶ್ರೀ ಮಾರಿಯಮ್ಮ ದೇವಿಯ ಬೇವಿನ ಸೊಪ್ಪಿನ ಶಕ್ತಿ ಕರಗ ಆರಾಧನೆ ನಡೆಯಲಿದೆ.
ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಈ ವಿಶೇಷ ಕರಗೋತ್ಸವ ನಡೆಯುತ್ತಿದ್ದು, ಹಿಂದಿನ ಕಾಲದಲ್ಲಿ ಭೀಕರ ಸಾಂಕ್ರ‍್ರಾಮಿಕ ರೋಗಗಳಿಂದ ಊರಿನಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ರೋಗವನ್ನು ಹೋಗಲಾಡಿಸಲು ಊರಿನ ಹಿರಿಯರು ಸೇರಿ ನಾಡಿನ ಸುಭಿಕ್ಷೆಗಾಗಿ ಶಕ್ತಿ ದೇವತೆಗಳ ಪ್ರಾರ್ಥನೆಯೊಂದಿಗೆ ಕರಗ ಆರಾಧನೆ ಆರಂಭವಾಯಿತು. ಅದರಲ್ಲೂ ವಿಶೇಷವಾಗಿ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಆಗಿನ ಕಾಲದಿಂದಲೇ ಸಾಂಕ್ರ‍್ರಾಮಿಕ ರೋಗಗಳನ್ನು ಊರಿನಿಂದ ಹೊರಗಟ್ಟಲು ಬೇವಿನ ಸೊಪ್ಪಿನ ಶಕ್ತಿ ಕರಗೋತ್ಸವ ಆರಂಭಿಸಲಾಯಿತು ಎಂಬ ಪ್ರತೀತಿ ಇದೆ.
ತಾ. ೮ ರಂದು ಸಂಜೆ ಪಂಪಿನ ಕೆರೆಯಿಂದ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಮಾರಿಯಮ್ಮ ಶಕ್ತಿ ಕರಗಗಳ ಮೆರವಣಿಗೆ ಆರಂಭವಾಗಲಿದೆ. ತಾ. ೯, ೧೦ ರಂದು ದೇವಾಲಯದಲ್ಲಿ ವಿಶೇಷ ಪೂಜೆಗಳು ಜರುಗಲಿವೆ. ತಾ. ೧೧ ರಂದು ಸಂಜೆ ದೇವಾಲಯದಲ್ಲಿ ದೇವಿಗೆ ವಿಶೇಷವಾದ ದೀಪಗಳ ಆರಾಧನೆಯ ನಂತರ ಕರಗಗಳ ವಿಸರ್ಜನೋತ್ಸವ ನಡೆಯಲಿದೆ.