ಭಾಗಮಂಡಲ, ಮೇ ೫: ಕಳೆದ ೨೬ ವರ್ಷಗಳಿಂದ ಚೆಟ್ಟಿಮಾನಿಯ ಕುಂದಚೇರಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ಗೌಡ ಕುಟುಂಬಗಳ ನಡುವೆ ನಡೆಯುವ ಕೆದಂಬಾಡಿ ಕ್ರಿಕೆಟ್ ಪಂದ್ಯಾಟವನ್ನು ಈ ವರ್ಷ ಅನಿವಾರ್ಯ ಕಾರಣಗಳಿಂದ ರದ್ದಾಗಿದೆ. ೨೦೨೩ರಲ್ಲಿ ನಡೆಸಲಾಗುವುದು ಎಂದು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಹೇಳಿದರು.
ಕೆದಂಬಾಡಿ ಕ್ರಿಕೆಟ್ ಕ್ಲಬ್ ಆವರಣದಲ್ಲಿ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಕಳೆದ ೨೬ ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿದ್ದು ಕಳೆದ ಮೂರು ವರ್ಷಗಳಿಂದ ಕೋವಿಡ್ನಿಂದಾಗಿ ಪಂದ್ಯಾವಳಿ ನಡೆಸಲಾಗಿಲ್ಲ. ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ನಡೆಸಲಾಗುತ್ತಿದ್ದ ಪಂದ್ಯಾಟವನ್ನು ೨೦೨೩ರಲ್ಲಿ ನಡೆಸಲಾಗುವುದು ಎಂದರು.
ಈ ಸಂದರ್ಭ ಕೆದಂಬಾಡಿ ಕೀರ್ತಿಕುಮಾರ್ ಮಾತನಾಡಿ, ಅಮರವೀರ ಕೆದಂಬಾಡಿ ರಾಮಯ್ಯ ಗೌಡ ಅವರ ಸ್ವಾಗತ ಕಮಾನು ಸುಳ್ಯ ಸಮೀಪದ ಊರಿನಲ್ಲಿ ನಿರ್ಮಾಣವಾಗುತ್ತಿದ್ದು, ಮೇ ತಿಂಗಳ ಅಂತ್ಯದೊಳಗೆ ಉದ್ಘಾಟನೆಗೊಳ್ಳಲಿದೆ ಎಂದರು. ಅಲ್ಲದೆ ೧೮೩೭ ರ ಸಮರವೀರ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಒಂದು ಮಂಗಳೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಕೆದಂಬಾಡಿ ಹರೀಶ್, ಕೆ.ಟಿ. ರಮೇಶ್ ಚಂದ್ರಶೇಖರ್, ಯಮುನಾ ಹರೀಶ್, ಮದನ್ ನಂದಿನಿ, ಸ್ಪಂದನ, ಮಾಜಿ ಅಧ್ಯಕ್ಷ ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.