ಗೋಣಿಕೊಪ್ಪಲು, ಮೇ ೪: ಸಂಸ್ಕೃತಿ ಉಳಿಯಲು ಕ್ರೀಡೆ ಅತ್ಯಂತ ಸಹಕಾರಿ ಎಂದು ಸಮಾಜ ಸೇವಕರು, ಕಾಫಿ ಬೆಳೆಗಾರ ಚೋಡುಮಾಡ ಶ್ಯಾಮ್ ಪೂಣಚ್ಚ ಹೇಳಿದರು. ತಿತಿಮತಿ ಶಾಲಾ ಮೈದಾನದಲ್ಲಿ ಯರವ ಸಮಾಜದ ವತಿಯಿಂದ ಆಯೋಜನೆಗೊಂಡಿದ್ದ ೧೦ನೇ ವರ್ಷದ ಎವುಲ್ಲಾತ್ಲೇರಂಡ ಕ್ರಿಕೆಟ್ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ, ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಯರವ ಸಮುದಾಯದ ಆಚಾರ ವಿಚಾರ ಸಂಸ್ಕೃತಿ ಎಂದಿಗೂ ಮರೆಯದಿರಿ ಇದನ್ನು ಉಳಿಸುವ ನಿಟ್ಟಿನಲ್ಲಿ ಯುವ ಸಮುದಾಯ ಕಟಿಬದ್ದರಾಗಿರಬೇಕು, ಸಂಸ್ಕೃತಿ ಉಳಿದರಷ್ಟೆ ಜನಾಂಗ ಉಳಿಯಲು ಸಾಧ್ಯ, ಕೊಡಗಿನ ಮೂಲ ನಿವಾಸಿಗಳಲ್ಲಿ ಒಂದಾದ ಯರವ ಸಮುದಾಯವು ಈ ಭೂಮಿಯಲ್ಲಿ ಹುಟ್ಟಿ ಬೆಳೆದವರು. ಹಲವು ಸಮುದಾಯಗಳು ತಮ್ಮ ಸಮುದಾಯದ ಒಗ್ಗಟ್ಟಿಗಾಗಿ ಕ್ರೀಡೆಯನ್ನು ಆಯೋಜಿಸುತ್ತಿದೆ. ಅದರಂತೆ ಯರವ ಸಮುದಾಯದ ಯುವಕರು ಒಟ್ಟಾಗಿ ಸಮುದಾಯವನ್ನು ಒಂದೆಡೆ ಸೇರಿಸುವ ಪ್ರಯತ್ನ ನಡೆಸುತ್ತಿದೆ. ಇದು ಶ್ಲಾಘನೀಯ ಎಂದರು.
(ಮೊದಲ ಪುಟದಿಂದ) ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಮುದಾಯವು ಹಿಂದೆ ಉಳಿದಿದೆ. ಸಮುದಾಯದ ಯುವಕರು ವಿದ್ಯಾವಂತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕು ಎಂದು ಯರವ ಸಮುದಾಯದ ಭಾಂದವರಿಗೆ ಇದೇ ವೇಳೆ ಶ್ಯಾಮ್ ಪೂಣಚ್ಚ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ ಮಾತನಾಡಿ, ಯರವ ಸಮುದಾಯಗಳು ನಶಿಸುವ ಹಂತ ತಲುಪಿದೆ. ಇದು ಆತಂಕಕಾರಿ ವಿಷಯ, ಈ ಬಗ್ಗೆ ಯುವಕರು ಜಾಗೃತಗೊಂಡು ಸಮುದಾಯವನ್ನು ಉಳಿಸುವ ಜವಾಬ್ದಾರಿ ನಿಭಾಯಿಸಬೇಕು. ಇತ್ತೀಚೆಗೆ ಸಮುದಾಯದ ಯುವಕರು ವಿದ್ಯಾವಂತರಾಗುವ ಮೂಲಕ ಕ್ರೀಡೆಯ ಮೂಲಕ ಸಮುದಾಯವನ್ನು ಒಂದೆಡೆ ಸೇರಿಸುವ ಪ್ರಯತ್ನ ಶ್ಲಾಘನೀಯ. ಸಂಸ್ಕೃತಿಯ ಭಾಗವಾದ ಚೀನಿದುಡಿ ಹಾಗೂ ತಂಡನ್ನು ಯಾರಿಗೂ ಬಿಟ್ಟುಕೊಡದಿರಿ, ಎಂದು ಯರವ ಭಾಷೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಸಭೆಯ ಗಮನ ಸೆಳೆದರು.
೧೦ನೇ ವರ್ಷದ ಕ್ರೀಡಾಕೂಟದ ಸವಿನೆನಪಿನಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ವರ್ಷದಿಂದ ವರ್ಷಕ್ಕೆ ಯರವ ಕ್ರೀಡೋತ್ಸವವು ಅದ್ದೂರಿಯಾಗಿ ನಡೆಯುತ್ತಿದೆ. ನಾಡಿನ ಜನತೆ ಕ್ರೀಡೋತ್ಸವಕ್ಕೆ ಸಹಕಾರ ನೀಡಬೇಕು. ಮೂಲ ನಿವಾಸಿಗಳಾಗಿ ನಮ್ಮೊಂದಿಗೆ ಗುರುತಿಸಿಕೊಂಡಿರುವ ಯರವ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ನಾವೆಲ್ಲರೂ ಇವರಿಗೆ ಸಹಕಾರ ನೀಡಬೇಕು. ಯರವ ಸಮುದಾಯ ಕುಡಿತದಿಂದ ಹೊರ ಬರಬೇಕು. ಯುವ ಸಮುದಾಯ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಬೇಕು. ತಮ್ಮ ಜೀವತಾವಧಿಯಲ್ಲಿ ದುಡಿದ ಹಣವನ್ನು ಕುಡಿತಕ್ಕೆ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಸಂಪಾದನೆ ಹಾಗೂ ಶ್ರಮ ಹಾಳಾಗುತ್ತಿದೆ. ಕುಟುಂಬದ ಏಳಿಗೆಗೆ ತೊಡಕುಂಟಾಗುತ್ತಿದೆ. ದುಶ್ಚÀಟಗಳಿಂದ ಹೊರಬರಬೇಕೆಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್. ಪಂಕಜ ಮಾತನಾಡಿ, ಯರವ ಸಮುದಾಯವು ಮುಂದಿನ ದಿನದಲ್ಲಿ ಕ್ರೀಡೆಗೆ ಮೀಸಲಾಗದೆ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸಬೇಕು. ಅನಾದಿ ಕಾಲದಿಂದಲೂ ವಾಸವಿರುವ ಯರವ ಸಮುದಾಯ ಇನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಯುವಕರು ಮುಂದಿನ ದಿನದಲ್ಲಿ ಸಮುದಾಯ ಭಾಂದವರ ಕಷ್ಟಗಳಿಗೆ ಸ್ಪಂದಿಸುವAತಾಗಬೇಕು ಎಂದರು. ಕ್ರೀಡೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಯರವ ಸಮಾಜದ ಅಧ್ಯಕ್ಷ ವೈ.ಎಂ. ರವಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆನ್ನಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ. ವೇಣುಕುಮಾರ್ ಯರವ ಸಂಘದ ಪದಾಧಿಕಾರಿಗಳಾದ ಸಿದ್ದಪ್ಪ, ಪ್ರವೀಣ್, ನಿತಿನ್, ಅಶೋಕ್, ವಿನು, ಸಂಜು, ರಘು, ಕಾಳ, ಸೋಮ, ಮಲ್ಲಪ್ಪ, ಪವಿ, ಶಶಿ, ಗಣೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಯರವ ಸಮಾಜದ ಸದಸ್ಯರಾದ ಪ್ರಸನ್ನ ಪ್ರಾರ್ಥಿಸಿ, ರೂಪೇಶ್ ನಿರೂಪಿಸಿ, ಕಾರ್ಯದರ್ಶಿ ಮಂಜು ಸ್ವಾಗತಿಸಿ, ಪ್ರಸನ್ನ ವಂದಿಸಿದರು. ಮೊದಲ ದಿನದ ಕ್ರೀಡೋತ್ಸವಕ್ಕೆ ಸುತ್ತಮುತ್ತಲಿನ ಯರವ ಜನಾಂಗದ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಯರವ ಸಮಾಜದ ಪದಾಧಿಕಾರಿಗಳು ಮುಂಜಾನೆ ತಮ್ಮ ಸಾಂಪ್ರಾದಾಯಿಕ ಪೂಜೆ ಸಲ್ಲಿಸಿ ಕ್ರೀಡೋತ್ಸವ ಆರಂಭಿಸಿದರು.
-ಹೆಚ್.ಕೆ. ಜಗದೀಶ್