ಶನಿವಾರಸಂತೆ, ಮೇ ೪: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ೨.೪೫ರಿಂದ ಮಿಂಚು ಗುಡುಗು - ಸಿಡಿಲಿನ ಆರ್ಭಟದೊಂದಿಗೆ ಉತ್ತಮ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ ಇದ್ದಕ್ಕಿದ್ದಂತೆ ಮಳೆ ಆರಂಭವಾಗಿ ಅರ್ಧ ಗಂಟೆ ಸುರಿಯಿತು. ಒಂದೂವರೆ ಗಂಟೆ ಬಿಡುವು ನೀಡಿದ ಮಳೆ ಪುನಃ ೪.೪೫ರಿಂದ ಗುಡುಗು -ಮಿಂಚು ಸಹಿತ ಸುರಿಯಲಾರಂಭಿಸಿತು. ಗಾಳಿಯ ಬೀಸುವಿಕೆ, ಮೈ ನಡುಗಿಸುವ ಚಳಿಯಿಂದ ಜನ ಮನೆಯಿಂದ ಹೊರಬರಲಿಲ್ಲ. ರಸ್ತೆ ಚರಂಡಿಯಲ್ಲಿ ನೀರು ಹರಿಯಿತು. ೫ರಿಂದ ಮಳೆಯ ತೀವ್ರತೆ ಹೆಚ್ಚಾಯಿತು. ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಜನಜೀವನ ಅಸ್ತವ್ಯಸ್ತವಾಯಿತು.
ಶನಿವಾರಸಂತೆಗೆ ಮುಕ್ಕಾಲು ಇಂಚು, ಮುಳ್ಳೂರಿಗೆ ೧ ಇಂಚು, ಕಾಜೂರಿಗೆ ೩೦ ಸೆಂಟ್, ಬಿಳಾಹ ಗ್ರಾಮಕ್ಕೆ ೧ ಇಂಚು, ಮೂದರವಳ್ಳಿ ಗ್ರಾಮಕ್ಕೆ ೭೫ ಸೆಂಟ್, ನಿಡ್ತ ಗ್ರಾಮಕ್ಕೆ ೫೫ ಸೆಂಟ್ ಮಳೆಯಾಗಿದೆ.