ಗೋಣಿಕೊಪ್ಪಲು, ಮೇ ೪: ಪೈಸಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ಹಾಗೂ ವಿವಿಧೆಡೆ ಹತ್ತು ಎಕರೆ ಒಳಗೆ ಕಾಫಿ ತೋಟ ಮಾಡಿಕೊಂಡಿರುವ ಮಾಲೀಕರಿಗೆ ಭೋಗ್ಯ ಪದ್ಧತಿ ಮೂಲಕ ಎರಡೂವರೆ ಏಕರೆಗೆ ವಾರ್ಷಿಕವಾಗಿ ಮೂರು ಸಾವಿರ ರೂ.ಗಳಿಗೆ ಆ ಕುಟುಂಬಗಳಿಗೆ ಹಾಗೂ ಅವರ ಮುಂದಿನ ವಾರಿಸು ದಾರರಿಗೆ ಭೋಗ್ಯ ಪದ್ಧತಿಯಲ್ಲಿ ಭೂಮಿಯನ್ನು ನೀಡುವ ರಾಜ್ಯ ಸರ್ಕಾರದ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕ ಖಂಡಿಸಿದೆ.
ಗೋಣಿಕೊಪ್ಪಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಸಂ.ಸ. ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್, ಕೊಡಗು ಜಿಲ್ಲೆಯ ಅನೇಕ ಭಾಗಗಳಲ್ಲಿ ವಾಸಿಸಲು ನಿವೇಶನವಿಲ್ಲದೆ ಸಾವಿರಾರು ಕುಟುಂಬಗಳು ಇವೆ. ಸರ್ಕಾರಕ್ಕೆ ಈ ಬಗ್ಗೆ ಪ್ರತಿಭಟನೆಯ ಮೂಲಕ ಗಮನ ಸೆಳೆದಿದ್ದರೂ ಸರ್ಕಾರ ನಿವೇಶನ ರಹಿತರಿಗೆ ನಿವೇಶನ ಕೊಡಲು ಮುಂದೆ ಬಂದಿಲ್ಲ. ಸರ್ಕಾರ ಬಡವರಿಗೆ ಹಕ್ಕು ಪತ್ರ ಹಾಗೂ ನಿವೇಶನ ನೀಡದೆ, ಸಾಕಷ್ಟು ಭೂಮಿ ಹಾಗೂ ಆಸ್ತಿಯನ್ನು ಹೊಂದಿರುವವರಿಗೆ ಭೋಗ್ಯದ ಮೂಲಕ ಸರ್ಕಾರಿ ಜಾಗವನ್ನು ನೀಡಲು ಮುಂದಾಗಿರುವುದು ಸರಿಯಲ್ಲ. ಇದು ಸಂವಿಧಾನದ ಆಶಯಗಳಿಗೆ ಮಾಡಿದ ಅಪಚಾರವಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯಲ್ಲಿ ಶೆಡ್ಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡಲು ಕೂಡಲೇ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದರು.
ಪೈಸಾರಿ ಜಾಗಗಳನ್ನು ಸರ್ಕಾರದ ವಶಕ್ಕೆ ಪಡೆದು ಬಡ ಕುಟುಂಬಗಳಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ನಿವೇಶನ ರಹಿತ ಹಾಗೂ ಭೂಮಿ ರಹಿತರಿಗೆ ಜಾಗವನ್ನು ಸರ್ಕಾರ ಮಂಜೂರು ಮಾಡಬೇಕು. ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯದಲ್ಲಿ ಭೋಗ್ಯ ಪದ್ಧತಿಗೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಒಂದು ವೇಳೆ ಈ ಬಗ್ಗೆ ಅವಕಾಶ ನೀಡಿದರೆ, ದಸಂಸ ಪ್ರತಿಭಟನೆ ನಡೆಸಲಿದೆ ಎಂದು ಸರ್ಕಾರವನ್ನು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿಯ ಸದಸ್ಯ ಟಿ.ಎನ್. ಗೋವಿಂದಪ್ಪ ಮಾತನಾಡಿ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ನಿವೇಶನ ರಹಿತರು ಆಗಿರುವುದರಿಂದ ಅವರಿಗೆ ಮೊದಲ ಅವಕಾಶ ನೀಡಬೇಕು. ಈ ಬಗ್ಗೆ ಕಾನೂನು ಹೋರಾಟಕ್ಕೂ ದಲಿತ ಸಂಘರ್ಷ ಸಮಿತಿ ಸಿದ್ಧತೆ ನಡೆಸುತ್ತಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಿಟ್ಟ ಜಾಗವನ್ನು ತೆರವುಗೊಳಿಸುವ ಹುನ್ನಾರವೂ ಕೂಡ ನಡೆಯುತ್ತಿವೆ. ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಹೆಚ್.ಬಿ. ಮುರುಗ, ಹೆಚ್.ಕೆ. ಚೆಲುವ ಉಪಸ್ಥಿತರಿದ್ದರು.