ಪೊನ್ನಂಪೇಟೆ, ಮೇ ೪: ನಾಗರಿಕ ವೇದಿಕೆಯ ೧೦ನೇ ವಾರ್ಷಿಕ ಮಹಾಸಭೆ ಪೊನ್ನಂಪೇಟೆ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್‌ನ ಸಭಾಂಗಣದಲ್ಲಿ ವೇದಿಕೆ ಅಧ್ಯಕ್ಷ ಪೊಕ್ಕಳಿಚಂಡ ಬಿ. ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಪೊನ್ನಂಪೇಟೆ ತಾಲೂಕು ಸ್ಥಾಪನೆಗೊಂಡು ವರ್ಷಗಳೇ ಕಳೆದರೂ ಪೊನ್ನಂಪೇಟೆ ಯಲ್ಲಿ ತಾಲೂಕು ಶಿಕ್ಷಣಾಧಿಕಾರಿಗಳ ಕಚೇರಿ, ಕೃಷಿ ಸಹಾಯಕ ನಿರ್ದೇಶಕದ ಕಚೇರಿ, ಪೊಲೀಸ್ ಡಿವೈಎಸ್‌ಪಿ ಕಚೇರಿ, ಅರಣ್ಯ ಇಲಾಖೆಯ ಡಿಸಿಎಫ್ ಕಚೇರಿ, ಪಿಡಬ್ಲ್ಯೂಡಿಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರವರ ಕಚೇರಿ ಹಾಗೂ ಸಹಾಯಕ ಸಾರಿಗೆ ಅಧಿಕಾರಿ ಕಚೇರಿ ಇಲ್ಲದೆ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದು, ಕೂಡಲೇ ಮಿನಿ ವಿಧಾನಸೌಧ ಸೇರಿದಂತೆ ಈ ಎಲ್ಲಾ ಕಚೇರಿಗಳು ಸ್ಥಾಪನೆಯಾಗ ಬೇಕಾಗಿದ್ದು, ಈಗಾಗಲೇ ಮನವಿ ಸಲ್ಲಿಸಿದ್ದು, ತಾಲೂಕು ಶಾಸಕರ ಮುಖಾಂತರ ಮುಖ್ಯಮಂತ್ರಿಯವರಿಗೆ ಬೇಡಿಕೆ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪೊನ್ನಂಪೇಟೆ ತಾಲೂಕಿನಲ್ಲಿ ಪ್ರಥಮ ದರ್ಜೆಯ ಕಾಲೇಜಿನ ಅವಶ್ಯಕತೆಯಿದ್ದು, ಸರಕಾರದೊಂದಿಗೆ ವ್ಯವಹರಿಸುವಂತೆ ನಿವೃತ್ತ ಶಿಕ್ಷಕ ಚೊಟ್ಟೆಯಂಡಮಾಡ ವಿಶ್ವನಾಥ್ ಸಲಹೆ ನೀಡಿದರು.
ಪೊನ್ನಂಪೇಟೆಯ ರಸ್ತೆ ಇಕ್ಕಟ್ಟಾಗಿದ್ದು, ಪೊನ್ನಂಪೇಟೆ ಜೂನಿಯರ್ ಕಾಲೇಜಿನಿಂದ ಪ್ರಾಥಮಿಕ ಶಾಲೆಯವರೆಗೆ ಸರಕಾರಿ ಜಾಗವಿದ್ದು, ಆ ಭಾಗದಲ್ಲಿ ರಸ್ತೆ ಅಗಲೀಕರಣಗೊಳಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸುವಂತೆ ಮೂಕಳೇರ ಲಕ್ಷö್ಮಣ ಅವರು ಸಲಹೆ ನೀಡಿದರು. ಹಿರಿಯ ಸದಸ್ಯ ಎಂ.ಎಸ್. ಅಪ್ಪಯ್ಯನವರು ಇತ್ತೀಚೆಗೆ ನಡೆಯುತ್ತಿರುವ ಆನೆ ಮತ್ತು ಹುಲಿಗಳ ಹಾವಳಿ ಬಗ್ಗೆ ಸರಕಾರದ ಗಮನಕ್ಕೆ ತಂದು ಪ್ರಾಣಿ ಮತ್ತು ಮಾನವ ಸಂಘರ್ಷವನ್ನು ತಪ್ಪಿಸಲು ಸೂಕ್ತ ಮಾರ್ಗೋಪಾಯ ಹಾಗೂ ನಷ್ಟದ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ ಬಗ್ಗೆ ಚರ್ಚಿಸಲಾಯಿತು.
ಪ್ರಾರಂಭದಲ್ಲಿ ವೇದಿಕೆಯ ನಿರ್ದೇಶಕಿ ರೇಖಾ ಶ್ರೀಧರ್ ಪ್ರಾರ್ಥಿಸಿದರು. ವೇದಿಕೆಯ ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ ಸರ್ವರನ್ನು ಸ್ವಾಗತಿಸಿದರು. ಸಭೆಯಲ್ಲಿ ಹಿರಿಯರಾದ ಎಂ.ಎಸ್. ಅಪ್ಪಯ್ಯ, ಕಾಕಮಡ ಚಂಗಪ್ಪ, ದಾನಿಗಳಾದ ಕಾಕಮಡ ಅರ್ಜುನ, ಅಜ್ಜಿಕುಟ್ಟೀರ ಭೀಮಯ್ಯ, ಸೇರಿದಂತೆ ಹಲವರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಯನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆ ಅಧ್ಯಕ್ಷ ಪಿ.ಬಿ. ಪೂಣಚ್ಚ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ದಾನಿಗಳಿಗೂ, ಹೋರಾಟಗಾರರಿಗೂ ಹಾಗೂ ಸರ್ವ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ೨೦೨೨-೨೫ ರ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಚೊಟ್ಟೆಯಂಡಮಡ ವಿಶ್ವನಾಥ್, ಕೆ.ಟಿ. ರಾಜೇಂದ್ರ, ಪುಚ್ಚಿಮಾಡ ದಿನೇಶ್ ಪೂಣಚ್ಚ, ಚಿಮ್ಮಣಮಾಡ ವಾಸು ಉತ್ತಪ್ಪ, ತಾಣಚೀರ ಪೂಣಚ್ಚ, ನೆಲ್ಲಿರ ನೇರು ಉತ್ತಪ್ಪ, ಮೂಕಳೇರ ಲಕ್ಷö್ಮಣ, ಅಡ್ಡಂಡ ಅನಿತಾ ಕಾರ್ಯಪ್ಪ ಚೊಟ್ಟೆ ಕಾಳಪಂಡ ಆಶಾ ಪ್ರಕಾಶ್ ಆಡಳಿತ ಮಂಡಳಿಗೆ ಆಯ್ಕೆಯಾದರು. ವಿಶೇಷ ಆಹ್ವಾನಿತ ಸದಸ್ಯರಾಗಿ ಆಲಿರ ಎರ್ಮು ಹಾಜಿ, ಅಣ್ಣಾಳ ಮಡ ಬಿ. ದೇವಯ್ಯ, ಪಿ.ಬಿ. ಪೂಣಚ್ಚ ಆಯ್ಕೆಗೊಂಡರು.