ಶ್ರೀಮಂಗಲ, ಮೇ ೪: ಪೊನ್ನಂಪೇಟೆ ತಾಲೂಕಿನ ಕಾನೂರು, ಬೆಕ್ಕೆಸೊಡ್ಲೂರು, ಕೋತೂರು ಮತ್ತು ಬಲ್ಯಮುಂಡೂರು ಗ್ರಾಮಸ್ಥರು ರಾಜ್ಯ ಕೆಪಿಟಿಸಿಎಲ್ನ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಹಾಗೂ ರಾಜ್ಯ ನಿವೃತ್ತ ಪ್ರಧಾನ ಕಾರ್ಯಪಾಲಕ ಅಭಿಯಂತರ ಬಟ್ಟಕಾಳಂಡ ಮುತ್ತಣ್ಣ ಅವರನ್ನು ಸನ್ಮಾನಿಸಿದರು.
ಬೆಕ್ಕೆಸೊಡ್ಲೂರುವಿನ ಶ್ರೀ ಮಂದತವ್ವ ದೇವ ಭಂಡಾರ ಸಭಾಂಗಣದಲ್ಲಿ ನಡೆದ ಸಮಾ ರಂಭದಲ್ಲಿ ಇವರನ್ನು ಸನ್ಮಾನಿಸ ಲಾಯಿತು. ಈ ಸಂದರ್ಭ ಮಾತನಾಡಿದ ರೋಷನ್ ಅಪ್ಪಚ್ಚು ಅವರು, ಕೊಡಗಿನಲ್ಲಿ ವಿದ್ಯುತ್ ಅಡಚಣೆರಹಿತವಾಗಿ ಮತ್ತು ಬೆಳೆಗಾರರ ಪಂಪ್ಸೆಟ್ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯುವಂತಾಗಲು ಹಲವು ಉಪವಿದ್ಯುತ್ ಸರಬರಾಜು ಕೇಂದ್ರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀಮಂಗಲ ಹಾಗೂ ಬಾಳೆಲೆಯಲ್ಲಿ ಉಪಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ಹಾಸನದಿಂದ ಕುಶಾಲನಗರದ ಮೂಲಕ ಜಿಲ್ಲೆಗೆ ವಿದ್ಯುತ್ ಸಂಪರ್ಕ ಮಾಡಲು ಮತ್ತೊಂದು ಮಾರ್ಗದ ಕಾರ್ಯ ಯೋಜನೆ ನಡೆಸಲಾಗುತ್ತಿದೆ. ಇದರಿಂದ ಈಗಾಗಲೇ ಹುಣಸೂರು, ನಾಗರಹೊಳೆ, ತಿತಿಮತಿ ಮೂಲಕ ದಕ್ಷಿಣ ಕೊಡಗಿಗೆ ಸಂಪರ್ಕದ ವಿದ್ಯುತ್ ಮಾರ್ಗಕ್ಕೆ ಅಡಚಣೆಯಾದರೆ ಇನ್ನೊಂದು ಮಾರ್ಗದಿಂದ ಸಂಪರ್ಕಿಸಲು ಪರ್ಯಾಯ ಮಾರ್ಗದ ಕಾರ್ಯಯೋಜನೆ ಇದಾಗಿದೆ ಎಂದು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ತೀತಿರ ರೋಷನ್ ಅಪ್ಪಚ್ಚು ಮತ್ತು ಬಟ್ಟಕಾಳಂಡ ಮುತ್ತಣ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂದತವ್ವ ದೇವ ಭಂಡಾರದ ಅಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿದರು.
ಸುಳಿಮಾಡ ಪೂವಮ್ಮ ಪ್ರಾರ್ಥಿಸಿ, ಪೊನ್ನಂಪೇಟೆ ಎ.ಪಿ.ಸಿ.ಎಂ.ಎಸ್. ಮಾಜಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ ಸ್ವಾಗತಿಸಿ, ವಂದಿಸಿದರು. ಅತಿಥಿಗಳ ಪರಿಚಯವನ್ನು ಕಾನೂರು ಪಿ.ಎ.ಸಿ.ಎಸ್. ಅಧ್ಯಕ್ಷ ಅಳಮೇಂಗಡ ವಿವೇಕ್ ಮಾಡಿದರು. ಅತಿಥಿಗಳಿಗೆ ಚೊಟ್ಟೆಕ್ಮಾಡ ವರುಣ್, ಚೆಪುö್ಪಡೀರ ಕೃಪ, ಚೆರಿಯಪಂಡ ಪವನ್ ಅವರು ಸನ್ಮಾನ ಮಾಡಿದರು.
ಈ ಸಂದರ್ಭ ಚೆಸ್ಕಾಂ ಜೆಇ ರಂಗಸ್ವಾಮಿ, ಕಾನೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಮಾಡ ರಶ್ಮಿ ಮತ್ತು ಕಾನೂರು, ಬೆಕ್ಕೆಸೊಡ್ಲೂರು, ಕೋತೂರು, ಬಲ್ಯಮುಂಡೂರು ಗ್ರಾಮಸ್ಥರು ಭಾಗವಹಿಸಿದ್ದರು.