ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಮೇ ೫ : ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ತೊಂಭತ್ತು ಸಾವಿರ ಎಕರೆಗೂ ಹೆಚ್ಚು ಭೂಮಿ ಒತ್ತುವರಿಯಾಗಿದ್ದು, ಹೀಗೆ ಒತ್ತುವರಿಯಾದ ಜಮೀನನ್ನು ಒತ್ತುವರಿದಾರರಿಗೇ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸ ಲಾಗಿದೆ ಎಂದು ಕಂದಾಯ ಇಲಾಖಾ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನ ಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು; ಕೊಡಗು ಜಿಲ್ಲೆಯಲ್ಲಿ ಹನ್ನೆರಡು ಸಾವಿರ ಎಕರೆ ಭೂಮಿ, ಹಾಸನದಲ್ಲಿ ಮೂವತ್ತು ಸಾವಿರ ಎಕರೆ ಭೂಮಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಲವತ್ತೆöÊದು ಸಾವಿರ ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ವಿವರ ನೀಡಿದರು. ಹೀಗೆ ಒತ್ತುವರಿಯಾದ ಭೂಮಿಯಲ್ಲಿ ಕಾಫಿ, ಏಲಕ್ಕಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದ್ದು ಈ ಭೂಮಿಯನ್ನು ಮೂವತ್ತು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಒತ್ತುವರಿದಾರರಿಗೇ ನೀಡಲಾಗುವುದು ಎಂದರು.
ಹೀಗೆ ಒತ್ತುವರಿಯಾದ ಭೂಮಿಯ ಪೈಕಿ ಐದು ಎಕರೆಗಿಂತ ಕಡಿಮೆ ಪ್ರಮಾಣದ ಭೂಮಿಯನ್ನು ಒತ್ತುವರಿ ಮಾಡಿಕೊಂಡವರ ಸಂಖ್ಯೆ ಶೇಕಡಾ ಎಂಭತ್ತರಷ್ಟಿದೆ. ಹೀಗಾಗಿ ಒಂದರಿAದ ಎರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎಕರೆಗೆ ವಾರ್ಷಿಕ ಒಂದೂವರೆ ಸಾವಿರ ರೂಪಾಯಿಗಳಿಂದ ಎರಡು ಸಾವಿರ ರೂಪಾಯಿಗಳಷ್ಟು ಗುತ್ತಿಗೆ ಹಣ ನಿಗದಿ ಪಡಿಸಲಾಗುವುದು. ಮೂರರಿಂದ ಐದು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎರಡರಿಂದ ಎರಡೂವರೆ ಸಾವಿರ ರೂಪಾಯಿ, ಐದರಿಂದ ಹತ್ತು ಎಕರೆ ಮೇಲ್ಪಟ್ಟ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎರಡೂವರೆಯಿಂದ ಮೂರು ಸಾವಿರ ರೂಪಾಯಿ ಗುತ್ತಿಗೆ ದರ ನಿಗದಿ ಪಡಿಸಲಾಗುವುದು.
ಇದೇ ರೀತಿ ಸ್ಲಾಬ್ ಆಧಾರದ ಮೇಲೆ ಒತ್ತುವರಿ ಭೂಮಿಗೆ ಗುತ್ತಿಗೆ ದರವನ್ನು ನಿಗದಿ ಮಾಡಲಾಗುವುದು ಎಂದ ಅವರು, ಇಂತಹ ಭೂಮಿಯನ್ನು ಹಲವಾರು ಕಾಲದಿಂದ ಒತ್ತುವರಿದಾರರು ಸರ್ಕಾರಕ್ಕೆ ಹಣ ಪಾವತಿಸದೆಯೇ ಅನುಭವಿಸುತ್ತಿದ್ದರು.
ಇನ್ನು ಮುಂದೆ ಅವರು ಗುತ್ತಿಗೆ ಹಣ ಪಾವತಿಸಬೇಕಾಗುತ್ತದೆ. ಆ ಮೂಲಕ ಒತ್ತುವರಿ ಜಮೀನು ಸರ್ಕಾರದ್ದು ಎಂದು ದಾಖಲೆಗಳಲ್ಲಿ ಖಚಿತವಾಗಿ ಗುರುತಿಸಲ್ಪಡುತ್ತದೆ ಎಂದರು.
ಇದೇ ರೀತಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒತ್ತುವರಿ ಗೇರು ಭೂಮಿಯನ್ನು ಒತ್ತುವರಿದಾರರಿಗೇ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಅರಣ್ಯ ಇಲಾಖೆಯಿಂದ ವಾಪಸ್
ತನ್ನ ವಶದಲ್ಲಿರುವ ಆರು ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಹಿಂತಿರುಗಿಸಲಿದ್ದು, ಅಗತ್ಯಕ್ಕೆ ಬೇಕಾದ ಭೂಮಿಯನ್ನು ಹೊರತುಪಡಿಸಿ ಉಳಿದ
(ಮೊದಲ ಪುಟದಿಂದ) ಭೂಮಿಯನ್ನು ರೈತರಿಗೆ ಹಂಚಲು ಸರ್ಕಾರ ನಿರ್ಧರಿಸಿದೆ, ಆ ಮೂಲಕ ಮೈಸೂರು, ಚಾಮರಾಜನಗರ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಇರುವ ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ತೆರೆ ಬೀಳಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಅರಣ್ಯ ಇಲಾಖೆಯ ವಶದಲ್ಲಿ ಆರು ಲಕ್ಷ ಹೆಕ್ಟೇರ್ ನಷ್ಟು ಭೂಮಿ ಡೀಮ್ಡ್ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದ್ದು ಮೂಲತ: ಇದು ಕಂದಾಯ ಇಲಾಖೆಗೆ ಸೇರಿದ್ದಾಗಿದೆ; ಈಗ ಈ ಭೂಮಿಯನ್ನು ಅರಣ್ಯ ಇಲಾಖೆೆ ಕಂದಾಯ ಇಲಾಖೆಗೆ ಹಸ್ತಾಂತರಿಸಲಿದ್ದು, ಹೀಗೆ ಕಂದಾಯ ಇಲಾಖೆಗೆ ಮರಳಲಿರುವ ಬಹುತೇಕ ಭೂಮಿಯನ್ನು ರೈತರಿಗೆ ಹಂಚಲು ನಿರ್ಧರಿಸಲಾಗಿದೆ ಎಂದರು.
ಕAದಾಯ ಇಲಾಖೆಗೆ ಮರಳಿ ಬರಲಿರುವ ಭೂಮಿಯ ಪೈಕಿ ಎಷ್ಟು ಪ್ರಮಾಣದ ಭೂಮಿ ಸರ್ಕಾರದ ಅಗತ್ಯಕ್ಕೆ ಬೇಕು ಎಂದು ಗುರುತಿಸಲಾಗುತ್ತಿದ್ದು, ಆಸ್ಪತ್ರೆಯಿಂದ ಹಿಡಿದು ಹಲವು ಸಾರ್ವಜನಿಕ ಕೆಲಸಗಳಿಗಾಗಿ ಇದು ಬಳಕೆಯಾಗಲಿದೆ. ಉಳಿದಂತೆ ಐದು ಲಕ್ಷ ಹೆಕ್ಟೇರ್ ನಷ್ಟು ಭೂಮಿಯನ್ನು ರೈತರಿಗೆ ಹಂಚಲಾಗುವುದು ಎಂದ ಅವರು, ಇದರಿಂದಾಗಿ ದಶಕಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ನುಡಿದರು.