ಸುಂಟಿಕೊಪ್ಪ, ಮೇ ೩: ಕರಾವಳಿ ಹಾಗೂ ದಕ್ಷಿಣ ಕನ್ನಡ ಜನರ ಧಾರ್ಮಿಕ ನಂಬಿಕೆಯಾಗಿರುವ ಕೊರಗಜ್ಜ ದೇವರನ್ನು ಜಿಲ್ಲೆಯ ಜನರು ಕೂಡ ಹೆಚ್ಚಾಗಿ ಆರಾಧಿಸುತ್ತಾರೆ. ಹಾಗೆಯೇ ಹಲವೆಡೆ ಕೊರಗಜ್ಜನ ದೇವಾಲಯ ಗಳಿವೆ. ಇದೀಗ ೬೦ ವರ್ಷಗಳ ಹಿಂದೆ ಪ್ರತಿಷ್ಠಾಪನೆ ಗೊಂಡು ಹುತ್ತದಲ್ಲಿ ಹುದುಗಿ ಹೋಗಿದ್ದ ಕೊರಗಜ್ಜನ ಪುನರ್ ಪ್ರತಿಷ್ಠಾಪನೆ ನೆರವೇರಲಿದೆ. ಗ್ರಾಮಸ್ಥರೇ ಸೇರಿ ಕೊರಗಜ್ಜನಿಗೆ ದೇವಾಲಯ ನಿರ್ಮಿಸಿದ್ದಾರೆ.

ಸುಂಟಿಕೊಪ್ಪ ಸಮೀಪದ ಅತ್ತೂರು ನಲ್ಲೂರುವಿನ ಭೂದಾನ ಪೈಸಾರಿಯಲ್ಲಿ ನೆಲೆನಿಂತಿರುವ ಕೊರಗಜ್ಜ ದೇವರ ಪ್ರತಿಷ್ಠಾಪನೆಗೆ ಅಲ್ಲಿನ ರಕ್ತೇಶ್ವರಿ

(ಮೊದಲ ಪುಟದಿಂದ) ಸೇವಾ ಸಮಿತಿ ಮುಂದಾಗಿದೆ. ಸುಮಾರು ರೂ. ೪ ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು, ಕೊರಗಜ್ಜನಿಗಾಗಿ ದೇವಾಲಯ ನಿರ್ಮಿಸಿ ಮುಂದಿನ ದಿನಗಳಲ್ಲಿ ಪೂಜಿಸಲಾಗುತ್ತದೆ. ಪರಶಿವನ ಅವತಾರ ಎಂದು ಕರೆಸಿಕೊಳ್ಳುವ ಕೊರಗಜ್ಜ ಭಕ್ತಾದಿಗಳ ಬೇಕು ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಜನರದ್ದು. ಹಲವೆಡೆ ಕೋಲಗಳು ನಡೆಯುತ್ತವೆ. ಜಿಲ್ಲೆಯ ಮೊದಲ ಕೊರಗಜ್ಜನ ಗುಡಿ ಎಂಬ ಪ್ರತೀತಿ ಕೂಡ ಭೂದಾನ ಪೈಸಾರಿಯಲ್ಲಿ ನೆಲೆನಿಂತಿರುವ ಕೊರಗಜ್ಜ ಸನ್ನಿಧಿಗಿದೆ.

ಹುತ್ತದಲ್ಲಿ ಹುದುಗಿದ್ದ ಕೊರಗಜ್ಜ: ೬೦-೭೦ ವರ್ಷಗಳಿಗೂ ಹಿಂದೆ ಗರಗಂದೂರಿನಲ್ಲಿದ್ದ ಕೊರಗಜ್ಜನ ಕಲ್ಲನ್ನು ಪಂಡಿತರು ತಂದು ಧಾರ್ಮಿಕ ಕಾರ್ಯಗಳನ್ನು ನಡೆಸಿ ಭೂದಾನ ಪೈಸಾರಿಯಲ್ಲಿ ಪ್ರತಿಷ್ಠಾಪಿಸಿದ್ದರು ಎಂಬ ಪ್ರತೀತಿ ಇದೆ. ಅಲ್ಲಿ ಸಣ್ಣ ಗುಡಿಸಿಲಿನ ಗುಡಿಯೂ ಇತ್ತು ಎನ್ನಲಾಗಿದೆ. ಆನಂತರದ ದಿನಗಳಲ್ಲಿ ಗುಡಿ ಹಾಳಾಗಿ ಕೊರಗಜ್ಜನ ಕಲ್ಲು ಹುದುಗಿ ಹೋಗಿದೆ. ಕೆಲ ವರ್ಷಗಳ ಹಿಂದೆ ಅಲ್ಲೇ ಇರುವ ಗುಳಿಗ ಹಾಗೂ ರಕ್ತೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಇಲ್ಲೊಂದು ಕೊರಗಜ್ಜನ ಕಲ್ಲಿದೆ ಎಂದು ತಿಳಿದು ಬಂತು. ಗ್ರಾಮಸ್ಥರಿಗೆ ದೋಷವೊಂದು ಬಾಧಿಸಿರುವುದು ಕೂಡ ಇದೇ ಸಂದರ್ಭ ತಿಳಿದು ಬಂದಿದೆ.

ಆನAತರ ಕೊರಗಜ್ಜ ದರ್ಶನ ಬಂದು ಹುತ್ತದಲ್ಲಿ ಒಂದೂವರೆ ಅಡಿ ಆಳದಲ್ಲಿ ಹುದುಗಿ ಹೋಗಿದ್ದ ಕೊರಗಜ್ಜ ಕಲ್ಲನ್ನು ತೋರಿಸಿದೆ. ಬಳಿಕ ದೇವಾಲಯ ಸಮಿತಿ ದೇವಾಲಯ ನಿರ್ಮಾಣಕ್ಕೆ ಮುಂದಾಗಿದೆ. ದಾನಿಗಳ ಸಹಕಾರ ಪಡೆದು ರೂ. ೪ ಲಕ್ಷ ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದ್ದು, ತಾ. ೧೩ ರಂದು ಕೊರಗಜ್ಜ ದೇವರ ಪುನರ್ ಪ್ರತಿಷ್ಠಾಪನ ಕಾರ್ಯ ನಡೆಯಲಿದ್ದು, ಅಂದು ಬೆಳಿಗ್ಗೆ ಕೋಲ ಕೂಡ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಅಜಿತ್ ಮಾಹಿತಿ ನೀಡಿದ್ದಾರೆ.

ದೇವಾಲಯ ನಿರ್ಮಾಣಕ್ಕೆ ಗ್ರಾಮದ ೪೦ ಕುಟುಂಬಗಳು ಹಾಗೂ ಕೆಲವು ದಾನಿಗಳು ನೆರವು ನೀಡಿದ್ದು, ಮತ್ತಷ್ಟು ಆರ್ಥಿಕ ಸಹಾಯ ಬೇಕಾಗಿದೆ. ನೆರವು ನೀಡಲು ಇಚ್ಚಿಸುವವರು ಮೊಬೈಲ್ ಸಂಖ್ಯೆ ೯೪೮೩೮೪೪೦೩೮ ಹಾಗೂ ೯೮೮೦೬೬೩೦೦೧ ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಸಮಿತಿ ಮನವಿ ಮಾಡಿದೆ.