ಭಾಗಮಂಡಲ, ಮೇ ೩: ಭಾಗಮಂಡಲ ಸನಿಹದ ಸಣ್ಣಪುಲಿಕೋಟು ಗ್ರಾಮದ ಕಡೋಡಿ ವಿಷ್ಣುಮೂರ್ತಿ ಉತ್ಸವ ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಜರುಗಿತು. ಎರಡು ವರ್ಷಕ್ಕೊಮ್ಮೆ ನಡೆಯುವ ಉತ್ಸವ ಸೋಮವಾರ ರಾತ್ರಿ ಬೊಳ್ಳಾಟ ನಡೆದು ಬಳಿಕ ಇತರ ದೈವಗಳ ಕೋಲ ನಡೆದು ಮರುದಿನ ಮಂಗಳವಾರದAದು ವಿಷ್ಣುಮೂರ್ತಿ ದೇವರ ಅಗ್ನಿಸ್ಪರ್ಶ ನಡೆಯಿತು. ಜೊತೆಗೆ ಗುಳಿಗನ ಕೋಲ ನಡೆಯಿತು. ವಿಷ್ಣುಮೂರ್ತಿ ದೇವರ ಅಗ್ನಿಸ್ಪರ್ಶ ನೋಡಿ ಭಕ್ತರು ಪುನೀತರಾದರಲ್ಲದೆ ಈ ವರ್ಷ ಸಹಸ್ರಾರು ಭಕ್ತರು ಆಗಮಿಸಿದ್ದರು.
ಜಿಲ್ಲೆ ಹಾಗೂ ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದ ಕೂಡ ಭಕ್ತರುಗಳು ಭಾಗವಹಿಸಿ ಹರಕೆಯನ್ನು ಸಲ್ಲಿಸಿದರು. ಸಂಜೆ ವೇಳೆ ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆದ ಬಳಿಕ ಕುಯ್ಯಮುಡಿ ಮತ್ತು ಕಡೋಡಿ ಕುಟುಂಬಸ್ಥರ ವತಿಯಿಂದ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.