ಪೊನ್ನAಪೇಟೆ, ಮೇ ೨: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ನಿನ್ನೆ ಗುಡುಗು-ಸಿಡಿಲು ಸಹಿತ ಸುರಿದ ಭಾರಿ ಗಾಳಿ ಮಳೆಗೆ ಇಲ್ಲಿನ ೧ ನೇ ವಿಭಾಗದಲ್ಲಿರುವ ನಿಸರ್ಗ ನಗರದ ಜಮ್ಮಡ ಮನು ಎಂಬವರ ಮನೆಯ ಶೀಟ್‌ಗಳು ಹಾರಿ ಹೋಗಿ ಸಂಪೂರ್ಣ ಹಾನಿಯಾಗಿವೆ.

ಮಳೆಯಿಂದ ಹಾನಿಗೊಳಗಾಗಿರುವ ಮನೆಗಳಲ್ಲಿ ೪ ಕುಟುಂಬಗಳು ಬಾಡಿಗೆಗೆ ವಾಸವಾಗಿದ್ದರು. ೪ ಮನೆಗಳ ಮೇಲ್ಛಾವಣಿಗೆ ಹೊದಿಸಿದ್ದ ಶೀಟುಗಳು ಹಾನಿಗೊಳಗಾಗಿರುವುದರಿಂದ ಮಳೆಯ ನೀರು ಮನೆ ಒಳಗೆ ಸುರಿದ ಪರಿಣಾಮ ಮನೆಯೊಳಗಿದ್ದ ಬಟ್ಟೆ ಬರೆಗಳು, ಹಾಸಿಗೆ, ದಿನಸಿ ಸಾಮಗ್ರಿಗಳು ಸಂಪೂರ್ಣವಾಗಿ ಹಾಳಾಗಿವೆ. ಶೀಟ್‌ಗಳು ಮನೆಯ ಒಳಗೆ ಬಿದ್ದಿರುವ ಪರಿಣಾಮ ಟಿವಿ, ಮಿಕ್ಸಿ, ಪಾತ್ರೆಗಳು ಹಾನಿಗೊಳಗಾಗಿವೆ. ಗಾಳಿಗೆ ಶೀಟ್‌ಗಳು ಹಾರುವ ಮುನ್ನ ಮನೆಯಲ್ಲಿದ್ದವರೆಲ್ಲ ಮಕ್ಕಳನ್ನು ಕರೆದುಕೊಂಡು ಹೊರಗೆ ಬಂದ ಕಾರಣ ಮನೆಯ ಸದಸ್ಯರಿಗೆ ಯಾವುದೇ ತೊಂದರೆಯಾಗಿಲ್ಲ.

ಮಳೆಯಿAದ ಮನೆಗೆ ಹಾನಿಯಾಗಿರುವ ವಿಷಯ ತಿಳಿದ ತಕ್ಷಣ ೧ ನೇ ವಿಭಾಗದ ಗ್ರಾಮ ಪಂಚಾಯಿತಿ ಸದಸ್ಯ ಆಲಿರ ರಶೀದ್ ಸ್ಥಳಕ್ಕೆ ಭೇಟಿನೀಡಿ ಪೊನ್ನಂಪೇಟೆ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿ, ಪಿಡಿಓ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ನಂತರ ಹಾನಿಗೊಳಗಾದ ಮನೆಯಲ್ಲಿ ವಾಸವಾಗಿದ್ದ ಸತೀಶ್ ಚೈತ್ರ ದಂಪತಿ, ಆನಂದ್ ವಿನುತಾ ದಂಪತಿ, ಪುಷ್ಪ ಅವರ ಕುಟುಂಬಗಳನ್ನು ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಿ ಅವರಿಗೆ ವಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟರು ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳಕ್ಕೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಗ್ರಾಮ ಲೆಕ್ಕಾಧಿಕಾರಿ ಪೂರ್ಣಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.