ಮಡಿಕೇರಿ, ಮೇ ೩: ಇಸ್ಲಾಂ ಧರ್ಮದ ಪವಿತ್ರಗ್ರಂಥ ಖುರ್‌ಆನ್ ಅನ್ನು ಕಂಠಪಾಠ ಮಾಡುವ ಮೂಲಕ ಮಡಿಕೇರಿಯ ೧೫ರ ಹರೆಯದ ಬಾಲಕ ಮೊಹಮದ್ ಸಿರಾಜುದ್ದೀನ್ ಅಪೂರ್ವ ಸಾಧನೆ ಮಾಡಿದ್ದಾರೆ.

ಮಡಿಕೇರಿ ನಗರದ ಯಾಮೀನ್ ಇಸ್ಮಾಈಲ್ ಹಾಜಿ - ನಸೀಮಾ ದಂಪತಿ ಪುತ್ರ ಸಿರಾಜುದ್ದೀನ್ ಮಡಿಕೇರಿಯ ಕ್ರೆಸೆಂಟ್ ಶಾಲೆಯಲ್ಲಿ ೬ನೇ ತರಗತಿಯವರೆಗೆ ಓದಿ ಆ ಬಳಿಕ ಮಂಗಳೂರು ಸಮೀಪದ ಮುಳೂರು ಅಲ್ ಇಹ್ಸಾನ್ ವಿದ್ಯಾಸಂಸ್ಥೆಯಲ್ಲಿ ತನ್ನ ವ್ಯಾಸಂಗ ಮುಂದುವರಿಸಿದ್ದಾನೆ. ಮೂರು ವರ್ಷಗಳ ಅವಧಿಯಲ್ಲಿ ಸಿರಾಜುದ್ದೀನ್ ೬೦೦ ಪುಟಗಳ ಬೃಹತ್ ಗ್ರಂಥದ ಎಲ್ಲ ೧೧೪ ಅಧ್ಯಾಯಗಳನ್ನು ಕಲಿತು ಕಂಠಪಾಠ ಮಾಡುವ ಮೂಲಕ ವಿದ್ಯಾಸಂಸ್ಥೆಗೂ ಮುಸ್ಲಿಂ ಸಮಾಜಕ್ಕೂ ಕೀರ್ತಿ ತಂದಿದ್ದಾನೆ. ಪವಿತ್ರ ಧರ್ಮಗ್ರಂಥವನ್ನು ಕಂಠಪಾಠ ಮಾಡಿರುವ ಮಡಿಕೇರಿಯ ಪ್ರಥಮ ವ್ಯಕ್ತಿಯಾಗಿ ಸಿರಾಜುದ್ದೀನ್ ಹೊರಹೊಮ್ಮಿದ್ದಾನೆ.