ಮಡಿಕೇರಿ ಮೇ ೨ : ಕಾರ್ಮಿಕ ವರ್ಗ ಒಗ್ಗಟ್ಟು ಮತ್ತು ಸೇವಾ ಮನೋಭಾವವನ್ನು ಪ್ರದರ್ಶಿಸಬೇಕೆಂದು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ್ ಸಲಹೆ ನೀಡಿದರು. ಸರಕಾರಿ ಆಸ್ಪತ್ರೆಯ ಸಿಐಟಿಯು ಸಂಯೋಜಿತ ಸ್ವಚ್ಛತಾ ಸಿಬ್ಬಂದಿ ಹಾಗೂ ಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಮಿಕರ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ನಾನು ಕೂಡ ಒಬ್ಬ ಕಾರ್ಮಿಕನಂತೆ. ಕಾರ್ಮಿಕರು ವೈಯಕ್ತಿಕ ಪ್ರತಿಷ್ಠೆ, ವೈಮನಸ್ಯಗಳಿಂದ ದೂರ ಉಳಿದು ಪ್ರತಿಯೊಂದು ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಸೇವೆ ಸಲ್ಲಿಸಬೇಕು. ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ ಮೇ ದಿನಾಚರಣೆಯ ಹಿಂದಿನ ಹೋರಾಟದ ದಿನಗಳು ಮತ್ತು ಪ್ರಸ್ತುತ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದರು. ಕಾರ್ಮಿಕರನ್ನು ೮ ಗಂಟೆಗಳಷ್ಟೇ ದುಡಿಸಿಕೊಳ್ಳ ಬೇಕೆನ್ನುವ ನಿಯಮವಿದ್ದರೂ ಇದನ್ನು ಉಲ್ಲಂಘಿಸಿ ಶೋಷಣೆಗೆ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಖಾಸಗೀಕರಣ ವ್ಯವಸ್ಥೆ, ಕಾರ್ಮಿಕ ವಿರೋಧಿ ನೀತಿಗಳು, ದುಡಿಮೆಗೆ ತಕ್ಕ ಫಲ ದೊರೆಯದೇ ಇರುವುದು ಕಾರ್ಮಿಕ ವರ್ಗವನ್ನು ಕಂಗಾಲಾಗಿಸಿದೆ. ಸವಾಲುಗಳನ್ನು ಎದುರಿಸಲು ಕಾರ್ಮಿಕರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾಸ್ಪತ್ರೆಯ ಡಾ.ಕಿರಣ್, ಡಾ.ನವೀನ್, ಹಿರಿಯ ಶುಶ್ರೂಷೂಷಕಿ ವೀಣಾ, ಪದಾಧಿಕಾರಿ ಧನಲಕ್ಷಿö್ಮ, ಜಾನಕಿ, ದೀಪ್ತಿ, ಬೇಬಿ, ಕಾಳಮ್ಮ ಜಾಜಿ, ಕರ್ನಾಟಕ ರಕ್ಷಣಾ ವೇದಿಕೆಯ ರವಿಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭ ಅಧ್ಯಕ್ಷ ಪಿ.ಆರ್.ಭರತ್ ಹಾಗೂ ಹಿರಿಯ ‘ಡಿ’ ಗ್ರೂಪ್ ನೌಕರರಾದ ಹೊನ್ನಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.