ಮಡಿಕೇರಿ, ಮೇ ೨: ಪ್ರಾಣಿ ಬೇಟೆಗೆ ತೆರಳಿದ ಸಂದರ್ಭದಲ್ಲಿ ಗುಂಡೇಟಿನಿAದ ವೀರಾಜಪೇಟೆ ಸಮೀಪದ ಕೊಟ್ಟೋಳಿ ಗುಂಡಿಕೆರೆ ನಿವಾಸಿಯಾಗಿದ್ದ ಎಂ.ಯು. ಹಮೀದ್ ಅವರ ಸಾವಿನ ಬಗ್ಗೆ ಇದೀಗ ವ್ಯಾಪಕವಾದ ಅನುಮಾನಗಳು ಮೂಡತೊಡಗಿದ್ದು, ವಿಶೇಷ ತನಿಖೆಗೆ ಜನ ಆಗ್ರಹಿಸುತ್ತಿದ್ದಾರೆ.ಕಳೆದ ತಿಂಗಳ ೨೨ರಂದು ರಾತ್ರಿ ಗುಂಡಿಕೆರೆಯಲ್ಲಿರುವ ತನ್ನ ಮನೆಯಿಂದ ತೆರಳಿದ್ದ ದಿ. ಎಂ.ಎ. ಉಸ್ಮಾನ್ ಎಂಬವರ ಮಗ ೩೬ ವರ್ಷ ಪ್ರಾಯದ ಹಮೀದ್ ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡೇಟು ತಗುಲಿ ಸಾವಿಗೀಡಾದರು. ಈ ಕಾರಣದಿಂದಾಗಿ ಅಂದು ಹಮೀದ್‌ರೊಂದಿಗೆ ಬೇಟೆಗೆ ತೆರಳಿದ್ದ ಬೇಟೋಳಿ ಗುಂಡಿಕೆರೆ ಗ್ರಾಮದ ಕೆ.ಎಸ್. ರಫೀಕ್ ಮತ್ತು ಕೆ.ಎಚ್.ಅಶ್ರಫ್ ಎಂಬಿಬ್ಬರ ಮೇಲೆ ಐಪಿಸಿ ಕಾಯ್ದೆ ೩೦೪ ರಂತೆ ಉದ್ದೇಶಪೂರ್ವಕವಲ್ಲದ ಕೊಲೆ, ಭಾರತೀಯ ಶಸ್ತಾçಸ್ತç ಕಾಯ್ದೆ ಸೇರಿದಂತೆ ಇನ್ನಿತರ ಕಾಯಿದೆಗಳಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂಬುದು ಪೊಲೀಸ್ ಪ್ರಥಮ ಮಾಹಿತಿ ವರದಿಯಾಗಿದೆ. ಘಟನೆಗೆ ಸಂಬAಧಿಸಿದAತೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳು ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆದರೆ ಘಟನೆಗೆ ಸಂಬAಧಿಸಿದAತೆ ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತೀವ್ರ ಅನುಮಾನ ಹೊರಹಾಕಿದ್ದು, ಈ ಕೃತ್ಯವನ್ನು ತಿರುಚಲಾಗಿದೆ ಎಂದು ಬಲವಾದ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಘಟನೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು ಮಧ್ಯವರ್ತಿಗಳ ಮೂಲಕ ಪೊಲೀಸರ ಮೇಲೆ ಒತ್ತಡ ತಂದು ಘಟನೆಯನ್ನು ತಮಗೆ ಬೇಕಾದಂತೆ ಚಿತ್ರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕೃತ್ಯದಲ್ಲಿ ಮತ್ತಷ್ಟು ಜನರು ಭಾಗಿಗಳಾಗಿದ್ದರೂ ಅವರೆಲ್ಲರನ್ನು ಕಾನೂನಿನ ಕುಣಿಕೆಯಿಂದ ಸದ್ಯಕ್ಕೆ ಪಾರು ಮಾಡಲಾಗಿದೆ. ಒಂದು ವೇಳೆ ಅಂದಿನ ಪ್ರಭಾರ ಡಿವೈಎಸ್ಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬಂದು ಸ್ಥಳೀಯ ಪೊಲೀಸರಿಗೆ ಚುರುಕು ಮುಟ್ಟಿಸದಿದ್ದಲ್ಲಿ ಪ್ರಕರಣ ಮತ್ತಷ್ಟು ಸಡಿಲಗೊಳ್ಳುತ್ತಿತ್ತು ಎಂಬದು ಕುಟುಂಬಸ್ಥರ ಮತ್ತು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಪ್ರಕರಣಕ್ಕೆ ಸಂಬAಧಿಸಿದAತೆ ಇರುವ ಅನುಮಾನಗಳ ಬಗ್ಗೆ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಮಾಹಿತಿ ಹಂಚಿಕೊAಡಿದ್ದು, ಇಡೀ ಘಟನೆಯನ್ನು ಕಟ್ಟುಕಥೆಗಳ ಮೂಲಕ ಸೃಷ್ಟಿಸಲಾಗಿದೆ. ಅಂದು ನೈಜವಾಗಿ ನಡೆದಿರುವ ಘಟನೆಯನ್ನು ಸಂಪೂರ್ಣವಾಗಿ ಮರೆಮಾಚಿ ಸತ್ಯದ ಮತ್ತು ಕಾನೂನಿನ ಕಣ್ಣಿಗೆ ಮಣ್ಣೆರಚಲಾಗಿದೆ. ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು, ದಕ್ಷ ತನಿಖಾತಂಡದ ಸಮಗ್ರವಾದ ಪ್ರಾಮಾಣಿಕ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಲು ಸಾಧ್ಯ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಈ ಕುರಿತು ವಿಶೇಷ ಆಸಕ್ತಿ ವಹಿಸಿ ವಿಶೇಷ ದಳದಿಂದ ಸಮಗ್ರ ತನಿಖೆ ಮಾಡಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಏ.೨೨ರಂದು ರಾತ್ರಿ ೮.೩೦ ರಿಂದ ೯ ರ ಅವಧಿಯಲ್ಲಿ ಹೊರಹೋಗಿ ಬರುವುದಾಗಿ ತನ್ನ ತಾಯಿಗೆ ತಿಳಿಸಿ ಮನೆಯಿಂದ

(ಮೊದಲ ಪುಟದಿಂದ) ತೆರಳಿದ್ದ ಹಮೀದ್, ಸೀದಾ ಹೋಗಿದ್ದು ಮೊದಲೇ ನಿರ್ಧಾರವಾಗಿದ್ದ ಪ್ರಾಣಿ ಬೇಟೆಗೆ. ಒಟ್ಟು ಮೂವರು ಬೇಟೆಗೆ ತೆರಳಿದ ಸಂದರ್ಭದಲ್ಲಿ ಗುಂಡಿಕೆರೆಯಿAದ ಅಂದಾಜು ೫ರಿಂದ ೬ಕಿ.ಮೀ. ದೂರದಲ್ಲಿರುವ ಹೆಗ್ಗಳ ಗ್ರಾಮದ ಪೂತಾಡಿಕಾಡು ಎಂಬಲ್ಲಿ ಹಮೀದ್‌ಗೆ ಅಕಸ್ಮಿಕವಾಗಿ ಗುಂಡೇಟು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ರಾತ್ರಿ ೧೦ ರಿಂದ ೧೦.೩೦ ರೊಳಗೆ ನಡೆದಿದೆ ಎಂಬುದು ಆರೋಪಿಗಳು ಪೊಲೀಸರಿಗೆ ನೀಡಿದ ಹೇಳಿಕೆಯಾಗಿದೆ. ಆದರೆ, ಕೇವಲ ಮೂರು ಜನರು ಮಾತ್ರ ಈ ಬೇಟೆಗೆ ತೆರಳಿದ್ದರು ಎಂಬ ವಿಷಯವನ್ನು ಗ್ರಾಮಸ್ಥರು ನಂಬಲು ಸಿದ್ಧರಿಲ್ಲ.

ರಾತ್ರಿ ೧೦.೩೦ ಗಂಟೆಗೆ ಗುಂಡೇಟಿನಿAದ ಹಮೀದ್ ಮೃತಪಟ್ಟಿದ್ದು ಖಚಿತಗೊಂಡರೂ ಮಧ್ಯರಾತ್ರಿ ೧:೩೦ರಿಂದ ೧.೪೫ ರ ಸಮಯದಲ್ಲಿ ಹಮೀದ್ ಅವರ ಮೃತದೇಹವನ್ನು ವೀರಾಜಪೇಟೆಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೇ ಸಮಯದಲ್ಲಿ ಇಬ್ಬರು ಆರೋಪಿಗಳು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ರಾತ್ರಿ ೧೦.೩೦ ರ ಸಮಯದಲ್ಲಿ ಮೃತಪಟ್ಟಿದ್ದರೂ ಮಧ್ಯರಾತ್ರಿ ೧:೪೫ರವರೆಗೆ ಹಮೀದ್ ಮೃತದೇಹ ಎಲ್ಲಿತ್ತು? ಇವರೆಲ್ಲರೂ ಪರಸ್ಪರ ಸಂಬAಧಿಕರಾಗಿದ್ದರೂ ಸಾವಿನ ಸುದ್ದಿ ಬೆಳಿಗ್ಗೆ ೨ಗಂಟೆಯ ವರೆಗೂ ಗೌಪ್ಯವಾಗಿರಿಸಿದ್ದು ಏಕೆ ಎಂಬುದು ಕುಟುಂಬಸ್ಥರ ಪ್ರಶ್ನೆಯಾಗಿದೆ.

ಗುಂಡೇಟಿನಿAದ ಸಾವನ್ನಪ್ಪಿದ ಹಮೀದ್ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ನೋಡಿದ ಗ್ರಾಮದ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಮೃತದೇಹದ ಮೂಗು ಮತ್ತು ಬಾಯಿಯಲ್ಲಿ ಹೊರತುಪಡಿಸಿದರೆ ದೇಹದ ಬೇರೆ ಭಾಗಗಳಲ್ಲಾಗಲಿ, ಬಟ್ಟೆಯಲ್ಲಾಗಲಿ ಯಾವುದೇ ರಕ್ತದ ಕಲೆಗಳ ಇರಲಿಲ್ಲ. ಮೃತದೇಹವನ್ನು ನೀರಿನಿಂದ ಪೂರ್ಣವಾಗಿ ಸ್ವಚ್ಛಗೊಳಿಸಲಾಗಿತ್ತು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಲ್ಲದೆ ಹಮೀದ್ ಬೇಟೆಗೆ ತೆರಳಿದ ಸಂದರ್ಭದಲ್ಲಿ ಹಾಕಲಾಗಿದ್ದ ಪ್ಯಾಂಟನ್ನು ಬದಲಿಸಲಾಗಿತ್ತು. ಈ ಗಂಭೀರವಾದ ಮಾಹಿತಿಯನ್ನು ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ. ಬೇಟೆಗೆ ತೆರಳಿದ ಸಂದರ್ಭ ಹಮೀದ್ ಧರಿಸಿದ ಪ್ಯಾಂಟ್ ಎಲ್ಲಿ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಹಮೀದ್ ಗುಂಡೇಟಿನಿAದ ಸಾವಿಗೀಡಾದ ವಿಷಯವನ್ನು ಜೊತೆಗೆ ತೆರಳಿದ್ದವರು ಗ್ರಾಮಸ್ಥರಿಗಾಗಲಿ, ಕುಟುಂಬಸ್ಥರಿಗಾಗಲಿ, ಮೃತನ ಮನೆಯವರಿಗಾಗಲಿ ಬೆಳಗಿನ ಜಾವ ೨:೦೦ ಗಂಟೆಯವರೆಗೂ ತಿಳಿಸಲೇ ಇಲ್ಲ. ಇದು ಗ್ರಾಮಸ್ಥರ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಹಮೀದ್ ಸಾವಿಗೀಡಾದ ವಿಷಯ ಕೇವಲ ಒಂದಿಬ್ಬರಿಗೆ ಮಾತ್ರ ತಿಳಿಸಲಾಗಿತ್ತು. ಈ ವಿಷಯ ತಿಳಿದ ಇಬ್ಬರು ಕಾರಿನಲ್ಲಿ ಸ್ಥಳಕ್ಕೆ ತೆರಳಿ ಹಮೀದ್ ಮೃತದೇಹವನ್ನು ಸಾಗಿಸಿದರು ಎಂದು ಪೊಲೀಸ್ ವರದಿಯಲ್ಲಿ ದಾಖಲಾಗಿದೆ. ಮೃತದೇಹವನ್ನು ಕಾಡಿನಿಂದ ಹೊತ್ತು ತಂದು ಕಾರಿಗೆ ಹಾಕಿ ಸಾಗಿಸಲು ಕೇವಲ ಇಬ್ಬರಿಗೆ ಮಾತ್ರ ಸಾಧ್ಯವೇ? ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಅಲ್ಲದೆ, ಬೇಟೆಗೆ ಜೊತೆಗೆ ತೆರಳಿದ್ದ ಕೆ.ಎಸ್. ರಫೀಕ್ ಎಂಬಾತ ತಾನು ಹಾರಿಸಿದ ಗುಂಡೇಟಿನಿAದ ಹಮೀದ್ ಸಾವನ್ನಪ್ಪಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ನಿಜವಾಗಿ ಯಾರು ಹಾರಿಸಿದ ಗುಂಡೇಟಿನಿAದ ಹಮೀದ್ ಸಾವನ್ನಪ್ಪಿದರು ಎಂಬುದು ಇನ್ನೂ ನಿಗೂಢವಾಗಿದೆ. ಇಲ್ಲಿ ರಫೀಕ್‌ನನ್ನು ಬಲವಂತವಾಗಿ ಒಪ್ಪಿಸಿದ್ದಾರೆ ಎಂಬುದು ಗ್ರಾಮಸ್ಥರ ಮಾತಾಗಿದೆ.

ಗುಂಡೇಟಿನಿAದ ಸಾವನ್ನಪ್ಪಿದ ಹಮೀದ್ ಬಳಿಯಿದ್ದ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿಲ್ಲ. ಆದರೆ ಹಮೀದ್ ಮನೆಯಿಂದ ಬರುವಾಗ ಆರೋಪಿ ರಫೀಕ್ ಮನೆಯಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ವಶಪಡಿಸಿಕೊಂಡಿರುವ ಪೊಲೀಸರು, ಆತನ ಮೃತದೇಹದಲ್ಲಿ ಇರಬೇಕಿದ್ದ ಮೊಬೈಲ್ ಫೋನನ್ನು ಪೊಲೀಸರು ಇದುವರೆಗೂ ವಶಪಡಿಸಿಕೊಳ್ಳದಿರುವ ಬಗ್ಗೆ ಆಶ್ಚರ್ಯ ಮೂಡಿಸುತ್ತದೆ ಎಂಬುದು ಗ್ರಾಮಸ್ಥರ ಹೇಳಿಕೆಯಾಗಿದೆ. ಕುಟುಂಬಸ್ಥರ ಪ್ರಕಾರ ಹಮೀದ್ ಬಳಿಯಿದ್ದ ಮೊಬೈಲನ್ನು ಆರೋಪಿಗಳೇ ತೆಗೆದು ತಮ್ಮ ಬಳಿ ಇರಿಸಿಕೊಂಡು ಹಮೀದನ ಅಂತ್ಯಕ್ರಿಯೆ ನಡೆದು ಎರಡು ದಿನಗಳ ನಂತರ ಮೃತನ ಮನೆಯವರಿಗೆ ಒಪ್ಪಿಸಿದ್ದಾರೆ.

ಆರೋಪಿಗಳು ತೋರಿಸಿರುವ ಘಟನಾ ಸ್ಥಳದ ಬಗ್ಗೆಯೂ ಹೆಚ್ಚು ಅನುಮಾನವಿರುವುದಾಗಿ ಹೇಳಿರುವ ಗ್ರಾಮಸ್ಥರು ಹಮೀದ್ ಗೆ ಗುಂಡೇಟು ತಗುಲಿದ ನಿಜವಾದ ಸ್ಥಳವನ್ನು ಪೊಲೀಸರ ಪ್ರಾಮಾಣಿಕ ತನಿಖೆಯಿಂದಷ್ಟೇ ಪತ್ತೆ ಹಚ್ಚಲು ಸಾಧ್ಯ. ತಡವಾಗಿ ವಿಷಯ ತಿಳಿದ ಕುಟುಂಬಸ್ಥರು ಬೆಳಗಿನ ಜಾವ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಲ್ಲಿ ವ್ಯಕ್ತಿಯೊಬ್ಬ ಗುಂಡೇಟು ತಗುಲಿ ಸಾವನ್ನಪ್ಪಿದ ಯಾವ ದೃಶ್ಯವೂ ಇರಲಿಲ್ಲ ಎನ್ನಲಾಗಿದೆ. ಬದಲಿಗೆ ಸ್ಥಳದಿಂದ ಅನತಿ ದೂರದ ಒಳಭಾಗಕ್ಕೆ ತೆರಳಿದಾಗ ಗುಂಡೇಟಿನಿAದ ಛಿದ್ರಗೊಂಡಿದ್ದ ಮೃತ ಹಮೀದ್ ಧರಿಸಿದ್ದ ಜಾಕೆಟ್, ಆಹಾರ ಪದಾರ್ಥ ಮತ್ತು ಕಾಡತೂಸುಗಳಿದ್ದ ಕಪ್ಪು ಬಣ್ಣದ ಬ್ಯಾಗೊಂದು ಗೋಚರಿಸಿದೆ. ಇವುಗಳನ್ನು ಡಿವೈಎಸ್ಪಿ ಸ್ಥಳ ಪರಿಶೀಲಿಸಿದ ನಂತರವೇ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತನ ಮೈಮೇಲಿದ್ದ ಜಾಕೆಟನ್ನು ಕಾಡಿನಲ್ಲಿ ಎಸೆಯಲು ಕಾರಣವೇನು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ಕಾರೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ ಮರುದಿನವೇ ಅದನ್ನು ಬಿಟ್ಟು ಕಳಿಸಿದ್ದು ಏಕೆ ಎಂಬುದು ಗ್ರಾಮಸ್ಥರ ಮತ್ತೊಂದು ಪ್ರಶ್ನೆಯಾಗಿದೆ.

ಪ್ರಕರಣದಲ್ಲಿ ನೆರೆ ಗ್ರಾಮದ ವ್ಯಕ್ತಿಗಳಿಬ್ಬರು ಭಾಗಿಯಾಗಿದ್ದು. ಅವರೇ ಮಧ್ಯವರ್ತಿಗಳಾಗಿ ‘ಡೀಲ್' ಕುದುರಿಸಿದ್ದಾರೆ ಎಂಬುದು ಗುಂಡಿಕೆರೆ ಗ್ರಾಮಸ್ಥರ ಆರೋಪವಾಗಿದೆ. ಮಧ್ಯವರ್ತಿಗಳು ರಾತ್ರಿಯೇ ವಕೀಲರೊಬ್ಬರನ್ನು ಸಂಪರ್ಕಿಸಿ ಅವರ ನಿರ್ದೇಶನದಂತೆ ಕಟ್ಟುಕತೆಯನ್ನು ಸೃಷ್ಟಿಸಿ ಪೊಲೀಸರಿಗೆ ತಿಳಿಸಲಾಗಿದೆ. ಪೊಲೀಸರು ಕೂಡ ಸತ್ಯ ತಿಳಿದಿದ್ದರೂ ಅನ್ಯಾಯವೆಸಗಿದ್ದಾರೆ ಎನ್ನುವುದು ಗ್ರಾಮಸ್ಥರ ಬಲವಾದ ಆರೋಪವಾಗಿದೆ. ವಿಷಯ ತಿಳಿದು ಬೆಳಗಿನ ಜಾವ ವೀರಾಜಪೇಟೆಗೆ ಆಗಮಿಸಿದ ಅಂದಿನ ಪ್ರಭಾರ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಅವರು ಆರೋಪಿಗಳ ಹೇಳಿಕೆಯಿಂದ ಅನುಮಾನಗೊಂಡು ಕತ್ತಲಿನಲ್ಲಿ ಎರಡು ಬಾರಿ ಸ್ಥಳ ಪರಿಶೀಲಿಸಿದ್ದಾರೆ ಎಂದು ತಿಳಿಸಿರುವ ಗ್ರಾಮಸ್ಥರು, ಮೇಲಾಧಿಕಾರಿಗಳ ದಾರಿ ತಪ್ಪಿಸುವ ಕೆಲಸವನ್ನು ಪೊಲೀಸರ ವತಿಯಿಂದ ವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೃತದೇಹವನ್ನು ಸಾಗಿಸಿದ ಮತ್ತು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ಸಮಗ್ರವಾದ ವಿಚಾರಣೆ ನಡೆಸಿದರೆ ಖಂಡಿತ ಸತ್ಯಾಂಶ ಹೊರಬೀಳುತ್ತದೆ ಎಂಬುದು ಗ್ರಾಮಸ್ಥರ ಅಭಿಮತವಾಗಿದೆ. ಬೇಟೆಗೆ ತೆರಳುವುದು ಕಾನೂನುಬಾಹಿರವಾದರೂ ವ್ಯಕ್ತಿಯೊಬ್ಬರ ಅನ್ಯಾಯದ ಸಾವಿಗೆ ನ್ಯಾಯ ದೊರೆಯಲೇಬೇಕು ಎನ್ನುವ ಗ್ರಾಮಸ್ಥರು, ನ್ಯಾಯ ದೊರೆಯದಿದ್ದಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಜೊತೆಗೂಡಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.