(ವಿಶೇಷ ವರದಿ: ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಏ. ೩೦: ಕಾರ್ಮಿಕರ ಕಲ್ಯಾಣಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿವೆ.
ಸರ್ಕಾರ ಈ ನಿಟ್ಟಿನಲ್ಲಿ ಯೋಜನೆಗಳು ಸಕಾಲದಲ್ಲಿ ಕಾರ್ಮಿಕರಿಗೆ ತಲುಪಿಸುವ ಸದುದ್ದೇಶದಿಂದ ಇಲಾಖೆಗೆ ಸಚಿವರನ್ನು ನೇಮಕಗೊಳಿಸಿ ಆ ಮೂಲಕ ಯೋಜನೆಯ ಫಲ ಕಾರ್ಮಿಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ.
ಕಾರ್ಮಿಕರ ಹಿತದೃಷ್ಟಿಯಿಂದ ದೇಶ ಹಾಗೂ ರಾಜ್ಯದಲ್ಲಿ ಅನೇಕ ಕಾರ್ಮಿಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಮಂದಿ ಕಾರ್ಮಿಕರಿಗೆ ಕೇವಲ ಓರ್ವ ಕಾರ್ಮಿಕ ಅಧಿಕಾರಿ ಕೆಲಸದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಪ್ರತಿ ತಾಲೂಕಿಗೊಂದು ಕಾರ್ಮಿಕ ಅಧಿಕಾರಿಯನ್ನು ಸರ್ಕಾರ ನೇಮಕ ಮಾಡಿದೆ. ಆದರೆ ವೀರಾಜಪೇಟೆ ತಾಲೂಕಿನಲ್ಲಿ ಕಾರ್ಮಿಕ ಅಧಿಕಾರಿ ಇಲ್ಲದೇ ಸರಿ ಸುಮಾರು ಆರು ತಿಂಗಳು ಕಳೆದಿವೆ.
ಕಾರ್ಮಿಕರ ಕಷ್ಟವನ್ನು ಆಲಿಸಲು ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿ ವೀರಾಜಪೇಟೆಯ ಕಚೇರಿಗೆ ವಾರಕ್ಕೊಮ್ಮೆ ಆಗಮಿಸುತ್ತಿದ್ದಾರೆ. ಇದರಿಂದ ಕಾರ್ಮಿಕರ ಸಮಸ್ಯೆ ಸಕಾಲದಲ್ಲಿ ಆಲಿಸಲು ಸಾಧ್ಯವಾಗುತ್ತಿಲ್ಲ.
ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಕಾರ್ಮಿಕನಿಗೆ ಸಮಸ್ಯೆ ಎದುರಾದಲ್ಲಿ ಅಧಿಕಾರಿಗಳ ಬಳಿ ತೆರಳಿದರೆ ಸರಿಯಾದ ಸಮಯದಲ್ಲಿ ಅಧಿಕಾರಿ ಲಭ್ಯವಾಗುತ್ತಿಲ್ಲ.
ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಸಿಗುತ್ತಿರುವ ೧೩ ಕ್ಕೂ ಅಧಿಕ ಪ್ರಯೋಜನಗಳು ಪಡೆಯಲು ಸಾಧ್ಯವಾಗುತ್ತಿಲ್ಲ.
ಕಾರ್ಮಿಕ ಮೃತಪಟ್ಟ ವೇಳೆ ಈತನ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಹಣವನ್ನು ಪಡೆಯಲು ಇದೀಗ ದೂರದ ಚಿಕ್ಕಮಗಳೂರು ಜಿಲ್ಲೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರ್ಮಿಕರ ಮಕ್ಕಳಿಗೆ ಸಿಗುವ ವಿವಾಹ ಅನುದಾನ ಪಡೆಯಲು ಅರ್ಹತೆ ಪಡೆದಿದ್ದರೂ ಇದನ್ನು ಪಡೆಯಲು ಜಿಲ್ಲೆಯಲ್ಲಿ ಅವಕಾಶವಿಲ್ಲದೇ ಚಿಕ್ಕಮಗಳೂರು ಕಚೇರಿಯನ್ನು ಅವಲಂಬಿಸಬೇಕಾಗಿದೆ.
ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ಸಂಬAಧಿಸಿದ ಅಧಿಕಾರಿಗಳು ಲಭ್ಯವಿಲ್ಲದಿರುವುದೇ ಇವುಗಳಿಗೆ ಪ್ರಮುಖ ಕಾರಣವಾಗಿವೆ.