ಕುಶಾಲನಗರ, ಏ. ೩೦: ಕೊಡಗು ಜಿಲ್ಲಾಡಳಿತ ಆಶ್ರಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದೊಂದಿಗೆ ತಾ. ೩ ರಂದು ಮಡಿಕೇರಿಯಲ್ಲಿ ಅದ್ಧೂರಿಯ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಅಂದು ಬೆಳಗ್ಗೆ ೯ ಗಂಟೆಗೆ ಮಡಿಕೇರಿ ಮಹದೇವಪೇಟೆ ಬಸವೇಶ್ವರ ದೇವಾಲಯದಿಂದ ತೆರೆದ ವಾಹನದಲ್ಲಿ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಲಿದೆ.

ಭಾರತೀಯ ವಿದ್ಯಾಭವನದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಂಬ ಶಿವಮೂರ್ತಿ, ಖಜಾಂಚಿ ಹೆಚ್.ಪಿ. ಉದಯಕುಮಾರ್, ಕುಶಾಲನಗರ ತಾಲೂಕು ನಿಯೋಜಿತ ಅಧ್ಯಕ್ಷ ಮಧುಸೂದನ್, ನಿರ್ದೇಶಕ ಪಿ. ಮಹದೇವಪ್ಪ ಸದಸ್ಯ ಬಿ.ಬಿ. ಲೋಕೇಶ್ ಇದ್ದರು.