ವೀರಾಜಪೇಟೆ, ಏ. ೩೦: ಕೊಡವ ಪದ್ಧತಿಯು ವಿಶಿಷ್ಟವಾದುದು. ಪ್ರತಿಯೊಂದು ಆಚರಣೆಯಲ್ಲಿಯೂ ಜಾನಪದದ ಅಂಶಗಳು ಅಡಕವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ ೧೪೭ನೇ ಹುಟ್ಟುಹಬ್ಬದ ಆಚರಣೆ ಅಂಗವಾಗಿ ಕೊಡವ ನಾಳ್ಪಟ್ಟಿ ಬಿಡುಗಡೆ ಮತ್ತು ಜೂವ ಪಾಟ್ ಪೈಪೋಟಿಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಕೊಡವ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ವೀಣಾ ಅಚ್ಚಯ್ಯ ಅವರು, ಕೊಡವ ಸಂಸ್ಕೃತಿಯು ಧೀಮಂತವಾದ ಸಂಸ್ಕೃತಿಯಾಗಿದ್ದು, ನಮ್ಮಲ್ಲಿ ನಡೆಯುವ ಕೆಲವು ಆಚರಣೆಗಳು ಅಳಿವಿನಂಚಿನಲ್ಲಿದೆ. ಆದರೂ ಆಚರಣೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಾನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಸಂಸ್ಕೃತಿಯನ್ನು ಉಳಿಸಲು ಸಂಘಟನೆಗಳು ತನ್ನದೇಯಾದ ರೀತಿಯಲ್ಲಿ ಶ್ರಮಿಸುತ್ತಿದೆ. ನಮ್ಮ ಪೂರ್ವಜರು ಮಾಡುತ್ತಿದ್ದ ಪ್ರತಿ ಕೆಲಸ ಕಾರ್ಯಗಳಿಗೆ ಜಾನಪದ ಶೈಲಿಯಲ್ಲಿ ಗೀತೆ ರಚನೆ ಮಾಡಿ ಹಾಡುತ್ತಿದ್ದರು. ಅಂದಿನ ಕಾಲಗಟ್ಟದಲ್ಲಿ ರಚನೆ ಮಾಡಿದ ಸಾಹಿತ್ಯಗಳ ಆಳವನ್ನು ಅರಿತು ಪ್ರಸ್ತುತ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯವಾಗಬೇಕು. ಇಂದಿನ ಪೀಳಿಗೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯು ಕಂಡುಬರುತ್ತಿದ್ದು ಜೀವನ ಶೈಲಿಯಲ್ಲಿ ಬದಲಾವಣೆಗಳು ಕಂಡಿದೆ. ಪುರಾತನವಾದ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯವಾಗುವತ್ತ ಗಮನ ಹರಿಸಿದಲ್ಲಿ ಮಾತ್ರ ಪದ್ಧತಿಯು ಜೀವಂತವಾಗುತ್ತದೆ ಎಂದು ಕರೆ ನೀಡಿದರು.
ಕೊಡವಾಮೆರ ಕೊಂಡಾಟ ಸಂಸ್ಥೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿ, ಕೊಡಗಿನ ಪುರಾತನವಾದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ೨೦೧೯ರಲ್ಲಿ ಸ್ಥಾಪನೆಯಾದ ಸಂಸ್ಥೆಯು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಸಾಗುತ್ತಾ ಬಂದಿದೆ. ಕೊಡವ ಆಚರಣಾ ಪದ್ಧತಿಯಲ್ಲಿ ಅನೇಕ ವಿಚಾರದಾರೆ ಅಡಕವಾಗಿದ್ದು, ಹುಟ್ಟಿನಿಂದ ಸಾವಿನವರೆಗೂ ನಡೆಸುವ ಸಕಲ ಕಾರ್ಯಪದ್ಧತಿಗಳು ಆಚರಣಾ ಕಟ್ಟಳೆಯ ಚೌಕಟ್ಟಿನಲ್ಲಿದೆ. ಪೂರ್ವಜರು ಉಪಯೋಗಿಸುತಿದ್ದ ವಸ್ತುಗಳು, ಸಾಹಿತ್ಯಗಳು, ಕಲೆ ಹೀಗೆ ಹಲವು ವಿಷಯಗಳಿಗೆ ಉಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಕೊಡವ ಜನಾಂಗದ ಸಾಹಿತ್ಯವನ್ನು ಧೀಮಂತಗೊಳಿಸಿದ ಸಾಹಿತಿಗಳನ್ನು ಎಂದಿಗೂ ಸ್ಮರಿಸುವ ಕಾರ್ಯಕ್ರಮಗಳನ್ನು ಸಂಸ್ಥೆಯು ಹಮ್ಮಿಕೊಂಡು ಬರುತ್ತಿದೆ. ಕಲೆ ಮತ್ತು ಸಾಹಿತ್ಯ, ಕಲೆ ಪ್ರಕಾರಗಳನ್ನು ಯುವ ಪೀಳಿಗೆಗೆ ಕಲಿಸಿ ಆಚರಣಾ ಪದ್ಧತಿಯನ್ನು ಉಳಿಸುವ ಕಾರ್ಯಕ್ಕೆ ಜನಾಂಗದ ಸರ್ವರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಳೇಟಿರ ಶ್ರೀನಿವಾಸ್ ಅವರು ಕಾರ್ಯಕ್ರಮದ ಮೊದಲಿಗೆ ಗುರುಹಿರಿಯರನ್ನು ಸ್ತುತಿಸಿದರು. ವೇದಿಕೆಯಲ್ಲಿ ಜೂವ ಪಾಟ್ ಪೈಪೋಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ಮತ್ತು ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ತೀತಿರ ಸ್ವರಾಜ್ ಕುಟ್ಟಪ್ಪ ಸ್ವಾಗತಿಸಿದರು. ಅಜ್ಜಿಕುಟ್ಟಿರ ಭವ್ಯಬೋಪಣ್ಣ ಕಾರ್ಯಕ್ರಮ ನಿರೂಪಿಸಿ, ಕುಲ್ಲಚಂಡ ದೇಚಮ್ಮ ಕೇಸರಿ ವಂದಿಸಿದರು.