ಮಡಿಕೇರಿ, ಏ. ೨೯: ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದ್ದರೂ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ತಂಡ ಇಂದು ದಾಳಿ ಮಾಡಿತು. ೨೫ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ ಮಾಡಿ ರೂ. ೧೧,೮೦೦ ದಂಡ ವಿಧಿಸಲಾಯಿತು.

ನಗರಸಭಾ ಆಯುಕ್ತ ರಾಮದಾಸ್ ಹಾಗೂ ಪರಿಸರ ವಿಭಾಗದ ಸಹಾಯಕ ಅಭಿಯಂತರರಾದ ಸೌಮ್ಯ ಹಾಗೂ ಸಿಬ್ಬಂದಿ ಇಂದು ಚೌಕಿಯಿಂದ ಮಾರುಕಟ್ಟೆವರೆಗಿನ ಹಲವಾರು ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟದ ಬಗ್ಗೆ ಪರಿಶೀಲಿಸಿದರು. ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರುಗಳಿಗೆ ದಂಡ ವಿಧಿಸಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಿದರು. ಚೌಕಿ ಬಳಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದಿದ್ದ ಬಗ್ಗೆ ಗಮನಿಸಿದ ತಂಡ ತ್ಯಾಜ್ಯದಲ್ಲಿ ದೊರೆತ ಬಿಲ್ಲುಗಳ ಆಧಾರದಲ್ಲಿ ಅಂಗಡಿ ಮಾಲೀಕನನ್ನು ಪತ್ತೆ ಹಚ್ಚಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮದಡಿ ರೂ. ೫೦೦೦ ದಂಡ ವಿಧಿಸಿತು.

ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿ ಶುಕ್ರವಾರ ನಗರಸಭೆಯಿಂದ ಈ ಕಾರ್ಯಾಚರಣೆ ನಡೆಯಲಿದೆ. ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪ್ಲಾಸ್ಟಿಕ್ ಅನ್ನು ತ್ಯಜಿಸಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಮೂಲಕ ಸಹಕರಿಸುವಂತೆ ಆಯುಕ್ತ ರಾಮದಾಸ್ ಕೋರಿದ್ದಾರೆ.