ಮಡಿಕೇರಿ, ಏ. ೨೯: ಇತ್ತೀಚಿಗೆ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಪಾಜೆಯಲ್ಲಿ ನಡೆದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾಟಾಚಾರಕ್ಕೆ ನಡೆದಿದೆ ಎಂದು ಕಾಂಗ್ರೆಸ್ ವಕ್ತಾರ ಪಿ.ಎಲ್. ಸುರೇಶ್ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ವಾಸ್ತವ್ಯದಲ್ಲಿ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ಯಾವುದೇ ಪರಿಹಾರ ನೀಡದಿರುವುದು ಖಂಡನೀಯ. ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ಕ್ರಮವಹಿಸಬೇಕೆಂದು ಆಗ್ರಹಿಸಿದ ಅವರು, ಸಣ್ಣ ನೀರಾವರಿ ಇಲಾಖೆಯಿಂದ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಚೆಕ್ ಡ್ಯಾಂ ನಿರ್ಮಿಸುತ್ತಿದ್ದು, ಇದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಮಾತನಾಡಿ, ಮದೆ ಗ್ರಾ.ಪಂ. ಸದಸ್ಯೆ ಗುತ್ತಿಗೆದಾರರ ಬಳಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆಡಿಯೋ ವೈರಲ್ ಆಗಿ ಜಿಲ್ಲೆಯ ಮಾರ್ಯಾದೆ ಹಾಳಾಗಿದೆ. ಬಿಜೆಪಿ ಬೆಂಬಲಿತ ಸದಸ್ಯೆಯಾಗಿರುವ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಮಾತನಾಡಿ, ರೈತರ ದಾಖಲೆ ಮನೆ ಬಾಗಿಲಿಗೆ ಎಂಬ ಕಂದಾಯ ಇಲಾಖೆಯ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಹಳೇ ದಾಖಲೆಗಳನ್ನು ನೀಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ದೂರಿದರು.
ನಾಪೋಕ್ಲು ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಕೊಡಗನ ತೀರ್ಥ ಕುಮಾರ್ ಮಾತನಾಡಿ, ಪೌತಿ ಖಾತೆಯಲ್ಲಿ ಹೆಸರು ಸೇರ್ಪಡೆ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮವಹಿಸುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಎನ್.ಎಸ್.ಯು.ಐ. ಅಧ್ಯಕ್ಷ ಕೊಂಬಾರನ ರೋಶನ್ ಗಣಪತಿ, ಜಿಲ್ಲಾ ಕಾರ್ಯದರ್ಶಿ ಮಂದ್ರೀರ ಮೋಹನ್ ಇದ್ದರು.