ಕುಶಾಲನಗರ, ಏ. ೨೯: ತಾಲೂಕಿನ ಹೆಬ್ಬಾಲೆ ಹೋಬಳಿ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ಹೆಬ್ಬಾಲೆಯ ಪ್ರೌಢಶಾಲೆಯಲ್ಲಿ ನಡೆಯಿತು.
ಶಿರಂಗಾಲ, ತೊರೆನೂರು, ಹೆಬ್ಬಾಲೆ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳನ್ನು ಒಳಗೊಂಡು ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕವನ್ನು ನೂತನವಾಗಿ ರಚಿಸಲಾಯಿತು. ನೂತನ ಘಟಕದ ಹೋಬಳಿ ಅಧ್ಯಕ್ಷರಾಗಿ ಮಣಜೂರು ಗ್ರಾಮದ ಎಂ.ಎನ್. ಮೂರ್ತಿ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಗೌರವ ಕಾರ್ಯದರ್ಶಿಗಳಾಗಿ ಹೆಬ್ಬಾಲೆಯ ಹೆಚ್.ಎನ್, ಸುಬ್ರಮಣ್ಯ ಮತ್ತು ಹೆಬ್ಬಾಲೆ ಪ್ರೌಢಶಾಲೆಯ ಶಿಕ್ಷಕಿ ಡಿ. ಕವಿತಾ, ಕೋಶಾಧಿಕಾರಿಯಾಗಿ ಶಿರಂಗಾಲದ ಎಸ್.ಎಸ್. ಚಂದ್ರಶೇಖರ್ ಅವರನ್ನು ನೇಮಿಸಲಾಯಿತು. ಹಾಗೆಯೇ ಪರಿಷತ್ತಿನ ಬೈಲಾದ ಪ್ರಕಾರ ಸಮಿತಿಗೆ ಪದಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರನ್ನು ನೇಮಿಸಲು ನಿಯೋಜಿತ ಅಧ್ಯಕ್ಷರಿಗೆ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಸೂಚಿಸಿದರು.
ಈ ಸಂದರ್ಭ ಪರಿಷತ್ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಪರಿಷತ್ತಿನ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸಾಹಿತ್ಯ ಕ್ಷೇತ್ರಕ್ಕೆ ಯುವ ಜನಾಂಗವನ್ನು ಸೆಳೆಯುವ ಮತ್ತು ಅವರ ಕೈಗೆ ಅಧಿಕಾರ ಕೊಡುವ ಕೆಲಸ ಆಗಬೇಕಿದೆ.
ಗ್ರಾಮೀಣ ಕಲೆ, ಸಂಸ್ಕೃತಿ ಹಾಗೂ ಜನಪದವನ್ನು ಸಂರಕ್ಷಿಸುವ ಕೆಲಸ ಪರಿಷತ್ತಿಗೆ ಆಗಬೇಕಿದೆ ಎಂದು ಹೇಳಿದರು. ೨೦೦೬ ರಲ್ಲಿ ಶಿರಂಗಾಲದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಿರಿ ಕಾರ್ಯಕ್ರಮ ಇಡೀ ಜಿಲ್ಲಾದ್ಯಂತ ಚರ್ಚೆಯ ವಿಷಯವಾಗುವಷ್ಟರ ಮಟ್ಟಿಗೆ ಯಶಸ್ವಿಯಾಗಿ ನಡೆದುದನ್ನು ಟಿ.ಪಿ. ರಮೇಶ್ ಸ್ಮರಿಸಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಹೆಚ್ಚಾಗಿ ಕೈಗೊಳ್ಳಲು ಹೋಬಳಿ ಘಟಕಗಳು ಮೂಲ ಪ್ರೇರಕವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೋಬಳಿ ಸಮಿತಿಗಳನ್ನು ರಚಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸದಸ್ಯತ್ವ ಆಂದೋಲನದ ಜೊತೆಗೆ ದತ್ತಿಗಳನ್ನು ಹೆಚ್ಚಾಗಿ ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಪರಿಷತ್ ಪದಾಧಿಕಾರಿಗಳು ಗಮನ ಹರಿಸಬೇಕು ಎಂದರು. ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ, ತಾಲೂಕು ಮಾಜಿ ಅಧ್ಯಕ್ಷ. ಟಿ.ಜಿ. ಪ್ರೇಮಕುಮಾರ್, ಪರಿಷತ್ತಿನ ತಾಲೂಕು ಸಮಿತಿ ಕೋಶಾಧಿಕಾರಿ ಉಮೇಶ್ ಸ್ವಾಗತಿಸಿದರೆ, ಕವಿತ ವಂದಿಸಿದರು.