ಗೋಣಿಕೊಪ್ಪಲು, ಏ. ೨೮: ಜಿಲ್ಲೆಯ ವಿವಿಧೆಡೆ ಹಾಗೂ ವಿಶೇಷವಾಗಿ ದಕ್ಷಿಣ ಕೊಡಗಿನ ಹಲವೆಡೆ ನಿರಂತರ ವನ್ಯಪ್ರಾಣಿ ಮಾನವ ಸಂಘರ್ಷದಿAದ ಮಾನವನ ಜೀವ ಹಾನಿ ಸೇರಿದಂತೆ ರೈತರ ಬೆಳೆಗಳಿಗೆ ನಷ್ಟ ಸಂಭವಿಸುತ್ತಿದ್ದು ಇವುಗಳ ಬಗ್ಗೆ ಸರ್ಕಾರ ತುರ್ತು ಹಾಗೂ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಪೊನ್ನಂಪೇಟೆ ನಾಗರಿಕ ವೇದಿಕೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಹಿರಿಯ ನಾಗರಿಕರಾದ ಎಂ.ಎಸ್. ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವನ್ಯಜೀವಿ ಮಾನವ ಸಂಘರ್ಷದ ವಿಷಯದಲ್ಲಿ ಪ್ರಮುಖರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸುದೀರ್ಘ ಚರ್ಚಿಸಿದರು. ಈ ವೇಳೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಚೆಪ್ಪುಡೀರ ಕುಶಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ವನ್ಯ ಪ್ರಾಣಿಗಳಿಂದ ಮಾನವನ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಈ ವಿಷಯದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ನಾಗರಿಕ ವೇದಿಕೆಯ ಮುಂದಾಳತ್ವದಲ್ಲಿ ಜಿಲ್ಲೆಯ ಪ್ರಮುಖ ೧೨ಕ್ಕೂ ಹೆಚ್ಚಿನ ಸಂಘ, ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ಕರೆತಂದು ನಂತರ ಸುದೀರ್ಘವಾಗಿ ಚರ್ಚೆ ನಡೆಸಿ ಆ ಮೂಲಕ ಜಿಲ್ಲೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಪರಿಮಿತಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ನಿರ್ಧಾರಕ್ಕೆ ಬರಲಾಯಿತು.
ಜಿಲ್ಲೆಯ ಪರಿಸರವಾದಿಗಳಾದ ಕರ್ನಲ್ ಮುತ್ತಣ್ಣ, ಚೆಪ್ಪುಡೀರ ಶರೀನ್ ಸುಬ್ಬಯ್ಯ ಸೇರಿದಂತೆ ಇನ್ನಿತರ ಪ್ರಮುಖರು ವನ್ಯ ಪ್ರಾಣಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿದರು. ಸರ್ಕಾರದಿಂದ ಸಿಗುವ ಪರಿಹಾರ ಹಾಗೂ ಆನೆ ಹಾವಳಿ ತಪ್ಪಿಸುವ ಸಲುವಾಗಿ ಶಾಶ್ವತ ಪರಿಹಾರಕ್ಕೆ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸುವ ಬಗ್ಗೆ ಸರ್ಕಾರಕ್ಕೆ ಒತ್ತಡ ತರುವ ಪ್ರಯತ್ನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಪಡೆದು ಪರಿಹಾರ ಕಂಡುಕೊಳ್ಳುವ ಬಗ್ಗೆ ನಾಗರಿಕ ವೇದಿಕೆ ಹಿರಿಯರಾದ ಮತ್ರಂಡ ಅಪ್ಪಚ್ಚು ಅವರು ವಿಷಯ ಪ್ರಸ್ತಾಪಿಸಿದರು.
ಈ ನಿಟ್ಟಿನಲ್ಲಿ ನಾಗರಿಕ ವೇದಿಕೆಯು ಇಂತಹ ಸಭೆ ನಡೆಸಲು ಮುಂದಾಗಿದೆ. ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಅನೇಕ ಹಿರಿಯ ಅಧಿಕಾರಿಗಳ ಸಲಹೆ ಸೂಚನೆ ಪಡೆಯುವ ನಿಟ್ಟಿನಲ್ಲಿ ಆರಂಭದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಸಾಕಷ್ಟು ವಿಚಾರಗಳ ಬಗ್ಗೆ
(ಮೊದಲ ಪುಟದಿಂದ) ಚರ್ಚೆ ನಡೆದಿದೆ ಎಂದರು. ನಾಗರಿಕ ವೇದಿಕೆಯ ಹಿರಿಯ ಸದಸ್ಯ
ಎರ್ಮು ಹಾಜಿ ಮಾತನಾಡಿ, ವನ್ಯ ಪ್ರಾಣಿಗಳ ನಿರಂತರ ಹಾವಳಿಯಿಂದ ಸಾಕಷ್ಟು ಜೀವಗಳು ಹಾನಿಯಾಗಿವೆ. ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಾಗರಿಕ ವೇದಿಕೆಯಿಂದ ಆರಂಭವಾಗಲಿ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಸಲ್ಲಿಸೋಣವೆಂದರು.
ಪರಿಸರ ಪ್ರೇಮಿ ಕರ್ನಲ್ ಮುತ್ತಣ್ಣ ಮಾತನಾಡಿ, ಜಿಲ್ಲೆಯ ಉದ್ದಗಲಕ್ಕೂ ಇರುವ ಅರಣ್ಯ ಪ್ರದೇಶಗಳು ವಾಣಿಜ್ಯ ಉದ್ದೇಶದಿಂದ ಹಾಳಾಗುತ್ತಿದೆ. ಹೀಗಾಗಿ ವನ್ಯ ಜೀವಿಗಳು ನಗರ ಪ್ರದೇಶದತ್ತ ಧಾವಿಸುತ್ತಿದೆ. ತೋಟದಲ್ಲಿ ನೆಲೆಸಿರುವ ಕಾಡಾನೆಗಳನ್ನು ಗುರುತಿಸಿ ಅವುಗಳನ್ನು ಹಿಡಿದು ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಳಿಸಲು ಇಲಾಖೆಯೂ ಅಗತ್ಯ ಕ್ರಮಕೈಗೊಳ್ಳಬೇಕು. ನಾಲ್ಕು ಪಥದ ರಸ್ತೆಗಳು, ರೈಲ್ವೆಗಳು ಜಿಲ್ಲೆಗೆ ಅವಶ್ಯಕತೆ ಇಲ್ಲ. ರೈಲ್ವೆ ಸಂಚಾರದಿAದ ಮಾನವನ ಸಂಖ್ಯೆ ಸಹಜವಾಗಿಯೇ ದ್ವಿಗುಣವಾಗಲಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಈ ಬಗ್ಗೆ ಜಿಲ್ಲೆಯ ನಾಗರಿಕನು ಜಾಗೃತೆ ವಹಿಸಬೇಕು. ಆನೆ ಕಾರಿಡಾರ್‌ನಲ್ಲಿ ವ್ಯತ್ಯಾಸವಾಗಿರುವು ದರಿಂದ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು.
ಸಭೆಗೆ ಆಗಮಿಸಿದ ವೀರಾಜಪೇಟೆ ತಾಲೂಕಿನ ಡಿಎಫ್‌ಒ ಚಕ್ರಪಾಣಿ ಮಾತನಾಡಿ, ವನ್ಯಜೀವಿ ಮಾನವ ಸಂಘರ್ಷ ತಡೆಯಲು ಇಲಾಖೆಯು ತನ್ನ ಇತಿಮಿತಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಕೊಡಗು ಫೌಂಡೇಷನ್ ಮೂಲಕ ಕಾರ್ಯಕ್ರಮ ಆಯೋಜಿಸಿ ಇವುಗಳ ಬಗ್ಗೆ ಪರಿಹಾರಕ್ಕೆ ಮುಂದಾಗಬಹುದು ಎಂದರು. ನಾಗರಿಕ ವೇದಿಕೆಯ ಅಧ್ಯಕ್ಷರಾದ ಪಿ.ಬಿ. ಪೂಣಚ್ಚ, ಚೆಪ್ಪುಡೀರ ಕೆ. ಸೋಮಯ್ಯ, ಚೆಪ್ಪುಡೀರ ಕೆ. ಪೊನ್ನಪ್ಪ, ಪಿ.ಬಿ. ಪ್ರಭಾಕರ್, ಕೆ.ಎನ್. ಚಂಗಪ್ಪ, ಜಮ್ಮಡ ಗಣೇಶ್ ಅಯ್ಯಣ್ಣ, ತಿತಿಮತಿ ಎಸಿಎಫ್ ಉತ್ತಪ್ಪ, ಪೊನ್ನಂಪೇಟೆ ಅರಣ್ಯ ಇಲಾಖೆಯ ದಿವಾಕರ್ ಸೇರಿದಂತೆ ಇನ್ನಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾ ಪುತ್ತಾಮನೆ ಪ್ರಾರ್ಥಿಸಿ, ಮೂಕಳೇರ ಕುಶಾಲಪ್ಪ ಸ್ವಾಗತಿಸಿ, ಪಿ.ಬಿ. ಪೂಣಚ್ಚ ವಂದಿಸಿದರು.