ಕೂಡಿಗೆ, ಏ. ೨೮: ಸಮುದಾಯದ ಕ್ರೀಡಾಕೂಟದ ಮೂಲಕ ಸೇವಾ ಮನೋಭಾವ ದಿಂದ ವಿವೇಚನ ಶಕ್ತಿ ಬೆಳೆಯಲು, ಸಹಕಾರ ಮತ್ತು ಸಮಾಜಕ್ಕೆ ಪೂರಕವಾಗುವ ವಿಷಯಗಳು ನಮ್ಮ ಬದುಕಿಗೆ ಆದರ್ಶ ಮತ್ತು ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಹೆಬ್ಬಾಲೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಘಟಕದ ಆಶ್ರಯದ ಜಿಲ್ಲಾಮಟ್ಟದ ವೀರಶೈವ ಲಿಂಗಾಯಿತ ದೊಡ್ಡವೀರ ರಾಜೇಂದ್ರ ಒಡೆಯರ್ ಥ್ರೋಬಾಲ್ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಭಾರದ ಗುಂಡು ಎಸೆತದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಹೆಚ್.ವಿ. ಶಿವಪ್ಪ ನೆರವೇರಿಸಿ ಮಾತನಾಡಿದರು. ಕ್ರೀಡಾಕೂಟ ಅಂಗವಾಗಿ ಹೆಬ್ಬಾಲೆ ಬನಶಂಕರಿ ಅಮ್ಮನವರ ದೇವಸ್ಥಾನ ದಿಂದ ಬೈಕ್ ರ್ಯಾಲಿ ಮೂಲಕ ಕಾಲೇಜು ಮೈದಾನಕ್ಕೆ ಕ್ರೀಡಾಜ್ಯೋತಿ ತರಲಾಯಿತು. ನಂತರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟವು ಆರಂಭಗೊAಡಿತು. ನಂತರ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಗ್ಗಜಗ್ಗಾಟ, ಥ್ರೋಬಾಲ್, ಶಟಲ್, ಬಾಲಕ ಬಾಲಕಿಯರಿಗೆ ವೈಯಕ್ತಿಕ ಸ್ಪರ್ಧೆಗಳಾದ ಕಾಳು ಹೆಕ್ಕುವುದು, ಕಪ್ಪೆ ಕುಪ್ಪಳಿಸುವುದು, ಓಟದ ಸ್ಪರ್ಧೆಗಳು ಮತ್ತಿತರ ಸ್ಪರ್ಧೆಗಳು, ಪುರುಷ ಮತ್ತು ಮಹಿಳೆಯರಿಗೆ ವೈಯಕ್ತಿಕ ಸ್ಪರ್ಧೆಗಳಾದ ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ರಂಗೋಲಿ, ಓಟದ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಕಾಲೇಜು ಮೈದಾನದಲ್ಲಿ ನಡೆದವು.
ಈ ಸಂದರ್ಭ ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾ ಘಟಕ ಅಧ್ಯಕ್ಷ ಹೆಚ್.ವಿ. ಶಿವಪ್ಪ ಉಪಾಧ್ಯ ಕ್ಷರುಗಳಾದ ಜಿ.ಎಂ. ಕಾಂತರಾಜ್, ಎಸ್.ಎಸ್. ಸುರೇಶ್, ಅನುರಾಧ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಶಾಂಭ ಶಿವಮೂರ್ತಿ, ಕೋಶಾಧ್ಯಕ್ಷ ಹೆಚ್.ಪಿ. ಉದಯ ಕುಮಾರ್ ಘಟಕದ ಪದಾಧಿಕಾರಿಗಳಾದ ಪಿ. ಮಹಾದೇವಪ್ಪ ಹೆಚ್.ಎಂ. ಮಧು ಸೂದನ್, ವೀರಾಜಪೇಟೆ ಘಟಕದ ಅಧ್ಯಕ್ಷ ಕೆ.ಎನ್. ಸಂದೀಪ್ ಸೇರಿದಂತೆ ಸಮುದಾಯದ ವಿವಿಧ ಘಟಕಗಳ ಪ್ರಮುಖರು ಭಾಗವಹಿಸಿದ್ದರು.