ವೀರಾಜಪೇಟೆ, ಏ. ೨೮: ಎಲ್ಲಾ ಧರ್ಮಗಳು ಶಾಂತಿಯನ್ನು ಬಯಸುತ್ತದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಬೆಂಗಳೂರು ಸಂಘಟನೆಯ ಸಹ ಕಾರ್ಯದÀರ್ಶಿಗಳಾದ ರಿಯಾಜ್ ಅಹಮ್ಮದ್ ಅವರು ರಂಜಾನ್ ಸಂದೇಶದಲ್ಲಿ ಹೇಳಿದರು. ಇಫ್ತಾರ್ ಸ್ನೇಹಕೂಟ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಉದ್ಯಮಿ ಹನೀಫ್ ಎಂ. ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ರಂಜಾನ್ ತಿಂಗಳಲ್ಲಿ ಧಾರ್ಮಿಕ ಸೇವೆಯೊಂದಿಗೆ ಸಾಮಾಜಿಕ ಸೇವೆಯು ನಿರಂತರವಾಗಿ ನಡೆಯಬೇಕು ಈ ನಿಟ್ಟಿನಲ್ಲಿ ನಗರದ ಸ್ವಚ್ಛತೆಗಾಗಿ ಹಗಲಿರುಳು ತಮ್ಮ ಸೇವೆಯನ್ನು ಒದಗಿಸುತ್ತಿರುವ ಪೌರಕಾರ್ಮಿಕರನ್ನು ಸ್ಮರಿಸುವುದು ಮತ್ತು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಮುಹಶೀರ್ ಅವರು ಕಾರ್ಯಕ್ರಮದ ಮೊದಲಿಗೆ ಕುರಾನ್ ಪಠಣ ಮಾಡಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುವ ಎಲ್ಲಾ ಕಾರ್ಮಿಕರಿಗೂ ಸಂಸ್ಥೆಯ ವತಿಯಿಂದ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ವಕೀಲರಾದ ಡಿ.ಸಿ. ಧ್ರುವ ಕುಮಾರ್ ಮತ್ತು ತೂಕ್‌ಬೊಳಕ್ ವಾರಪತ್ರಿಕೆಯ ಪ್ರಧಾನ ಸಂಪಾದಕರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರುಗಳು ಮಾತನಾಡಿದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಆರ್ಜಿ ಗ್ರಾಮ ಪಂಚಾಯಿತಿ ಉಪಧ್ಯಕ್ಷ ಕೆ.ಎನ್. ಉಪೇಂದ್ರ ಉಪಸ್ಥಿತರಿದ್ದರು. ಇ.ಎಂ. ರಫೀಖ್ ಸ್ವಾಗತಿಸಿದರು. ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ. ಬಶೀರ್ ನಿರೂಪಿಸಿದರು. ಅಬ್ದುಲ್ ರೆಹಮಾನ್ ವಂದಿಸಿದರು.