ಮಡಿಕೇರಿ,ಏ.೨೭: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಬಿಜೆಪಿ ಬೆಂಬಲಿತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ಸಿದ್ದಾಪುರದ ಕೆ.ಕೆ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಕುಶಾಲನಗರದ ರಾಮಕೃಷ್ಣಯ್ಯ ಅವರುಗಳು ಆಯ್ಕೆಯಾಗಿದ್ದಾರೆ.

ಹದಿನೇಳು ಮಂದಿ ನಿರ್ದೇಶಕರಿರುವ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿನ್ನೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾಗಿದ್ದ ಕೆ.ಎಂ.ಗಣೇಶ್ ಹಾಗೂ ಶ್ರೀನಿವಾಸ್, ಉಪಾಧ್ಯಕ್ಷ ಸ್ಥಾನಕ್ಕೆ ರಾಮಕೃಷ್ಣಯ್ಯ, ಸವಿತಾ ರೈ, ಮುನೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದರು. ಹದಿನೇಳು ಮಂದಿ ಪೈಕಿ ಒಂಭತ್ತು ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಶ್ರೀನಿವಾಸ್ ಹಾಗೂ ರಾಮಕೃಷ್ಣಯ್ಯ ಅವರ ಪರವಾಗಿ ನಿಂತರೆ ಉಳಿದ ಎಂಟು ಮಂದಿ ಗಣೇಶ್ ಬಣದ ಪರವಾಗಿ ನಿಂತರು. ಹಾಗಾಗಿ ಗಣೇಶ್, ಸವಿತಾ ರೈ ಮತ್ತು ಮುನೀರ್ ಅವರುಗಳು ನಾಮಪತ್ರ ವಾಪಸ್ ಪಡೆದು ಕಣದಿಂದ ದೂರ ಉಳಿದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ಬಿಜೆಪಿ ನಾಯಕರುಗಳು ಸಂಘದ ಕಚೇರಿಗೆ ಆಗಮಿಸಿ ಅಭಿನಂದಿಸಿದರು. ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮನು ಮುತಪ್ಪ, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ರವಿ ಬಸಪ್ಪ, ಜಿಲ್ಲಾ ಕಾರ್ಯದರ್ಶಿ ಕನ್ನಂಡ ಸಂಪತ್, ವಿಹೆಚ್‌ಪಿ ಮಾಜಿ ಅಧ್ಯಕ್ಷ ಡಿ.ನರಸಿಂಹ, ಚೇಂಬರ್ ಮಾಜಿ ಅಧ್ಯಕ್ಷ, ಸಂಘದ ಹಾಲಿ ನಿರ್ದೇಶಕ ಗಿರೀಶ್ ಗಣಪತಿ, ಇತರರು ಇದ್ದರು.