ಸೋಮವಾರಪೇಟೆ, ಏ. ೨೭: ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಕಲಾವಿದರಲ್ಲದೆ ಮಹಾನ್ ಮಾನವತಾವಾದಿಯಾಗಿದ್ದರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ಹೇಳಿದರು.
ಸಾಹಿತ್ಯ ಪರಿಷತ್ ಸಭಾಂಗಣ ದಲ್ಲಿ ನಡೆದ ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರ ಜನ್ಮ ದಿನದ ಅಂಗವಾಗಿ, ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ರಾಜ್ ಕುಮಾರ್ ಅವರು ಹುಟ್ಟಿದ ದಿನವನ್ನು ಕನ್ನಡ ಅಭಿಮಾನದ ದಿನವನ್ನಾಗಿ ಆಚರಿಸಲಾಗುತ್ತಿದೆ. ಕನ್ನಡವನ್ನು ಉಳಿಸಬೇಕು. ಕನ್ನಡ ಉಳಿದರೆ, ಕನ್ನಡಿಗರು ಉಳಿಯುತ್ತಾರೆ. ಕನ್ನಡಿಗರು ಉಳಿದರೆ ಕನ್ನಡ ನಾಡು ಉಳಿಯುತ್ತದೆ. ಕನ್ನಡ ಹೃದಯದ ಭಾಷೆಯಾಗಬೇಕು ಎಂದರು.
ಕನ್ನಡ ಭಾಷೆಯ ಕಂಪನ್ನು ಪಸರಿಸುವಲ್ಲಿ ರಾಜ್‌ಕುಮಾರ್ ಅವರ ಕೊಡುಗೆ ಅಪಾರವಾದುದು. ಗೋಕಾಕ್ ಚಳುವಳಿಯಲ್ಲಿ ಅವರು ಭಾಗಿಯಾದ ಹಿನ್ನೆಲೆ ಹೋರಾಟ ಬಲಿಷ್ಠವಾಗಿ, ಕನ್ನಡಕ್ಕೆ ಒಂದಷ್ಟು ಗೌರವ ಸಿಕ್ಕಿದಂತಾಯಿತು. ಆಡಳಿತದಲ್ಲಿ ಕನ್ನಡವನ್ನು ಕಾಣುವಂತಾಯಿತು ಎಂದರು.
ಹಿರಿಯರಾದ ಬಿ.ಟಿ. ತಿಮ್ಮಶೆಟ್ಟಿ, ಹೆಚ್.ಸಿ. ನಾಗೇಶ್, ಹೆಚ್.ಎ. ನಾಗರಾಜ್ ಅವರುಗಳು ಡಾ. ರಾಜ್ ಕುಮಾರ್ ಅವರ ಗುಣಗಾನ ಮಾಡಿದರು. ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಎ.ಪಿ. ವೀರರಾಜು, ಜ್ಯೋತಿ, ಕೋಶಾಧ್ಯಕ್ಷ ಕೆ.ಪಿ. ದಿನೇಶ್ ಮತ್ತಿತರರು ಇದ್ದರು.