ಸುಂಟಿಕೊಪ್ಪ, ಏ. ೨೮: ಸಮೀಪದ ೭ನೇ ಹೊಸಕೋಟೆ ಗ್ರಾಮ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಯುವತಿಯೋರ್ವಳನ್ನು ದಾರಿಯಲ್ಲಿ ಅಡ್ಡ ತಡಿದು, ಎಳೆದಾಡಿ ಆಕೆಯ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಪ್ರಕರಣ ನಡೆದಿದೆ.
ತಾ. ೨೭ರಂದು ಯುವತಿಯೋರ್ವಳು ಕೆಲಸಕ್ಕೆ ತೆರಳಿ ಮನೆಗೆ ವಾಪಸ್ಸು ಬರುವ ಸಂದರ್ಭ ಸಂಜೆ ಅದೇ ಗ್ರಾಮದ ಕಬೀರ್ ಎಂಬಾತ ಯುವತಿಯ ಕೈಯಲ್ಲಿದ್ದ ಮೊಬೈಲ್ ಹಾಗೂ ಹಣವನ್ನು ಕಸಿದುಕೊಂಡು ಯುವತಿಯನ್ನು ತೋಟದೊಳಗೆ ಎಳೆದಾಡಿ ಬೀಳಿಸಿದ್ದಾನೆ. ಈ ಸಂದರ್ಭ ತನ್ನ ಸಹೋದರಿಯನ್ನು ಮನೆಗೆ ಕರೆದೊಯ್ಯಲೆಂದು ಅದೇ ದಾರಿಯಲ್ಲಿ ಅವಳ ತಮ್ಮ ಆಗಮಿಸಿ ಕೈಯಲ್ಲಿದ್ದ ಟಾರ್ಚನ್ನು ಬೆಳಗಿಸಿದÀ ಸಂದರ್ಭ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಯುವತಿ ಹಾಗೂ ಯುವತಿಯ ತಮ್ಮ ತಾಯಿಗೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಯುವತಿ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದು, ಇಂದು ಬೆಳಿಗ್ಗೆ ಸ್ಥಳಕ್ಕೆ ಡಿವೈಎಸ್ಪಿ ಶೈಲೇಂದ್ರ, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ವಿರುದ್ಧ ಸೆಕ್ಷನ್ ೩೪೧ ,೩೫೪ ರಡಿ ಪ್ರಕರಣ ದಾಖಲಿಸಿ ಕೊಂಡು ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ. ಆರೋಪಿ ಈ ಹಿಂದೆಯೂ ಈ ಭಾಗದಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜೈಲು ವಾಸ ಅನುಭವಿಸಿದ್ದ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.