ಸಿದ್ದಾಪುರ, ಏ. ೨೭: ಕಾಫಿ ಬೆಳೆಗಾರರೊಬ್ಬರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಕೂದಲೆಳೆಯ ಅಂತರದಲ್ಲಿ ತೋಟದ ಮಾಲೀಕರು ಪ್ರಾಣಾಪಾಯದಿಂದ ಪಾರಾದ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನೆಲ್ಯಹುದಿಕೇರಿಯ ಅತ್ತಿಮಂಗಲ ಬಳಿಯ ಮೇರಿಲ್ಯಾಂಡ್ ಎಸ್ಟೇಟ್‌ನ ಮಾಲೀಕ ಲೆಸ್ಲಿ ಪಿಂಟೋ ಎಂಬವರ ತೋಟದ ಮನೆಯ ಮುಂಭಾಗದಲ್ಲಿ ಎಂದಿನAತೆ ಕಾರು ನಿಲುಗಡೆ ಗೊಳಿಸಿದ್ದಾರೆ. ಮಂಗಳವಾರ ರಾತ್ರಿ ಅಂದಾಜು ೮.೩೦ ರ ಸಮಯಕ್ಕೆ ಕಾಡಾನೆಯೊಂದು ಮನೆಯ ಬಳಿಯ ಅಂಗಳಕ್ಕೆ ಬಂದು ಶಬ್ಧ ಮಾಡುತಿತ್ತು. ಆನೆ ಎಂದು ತಿಳಿಯದೇ ಶಬ್ದವಾಗುತ್ತಿರುವುದನ್ನು ಕೇಳಿ ಮನೆಯ ಮಾಲೀಕರು ಹೊರಗಡೆ ಬರುವಷ್ಟರಲ್ಲಿ ಏಕಾಏಕಿ ಕಾಡಾನೆಯು ಮನೆಯ ಮಾಲೀಕರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಲೆಸ್ಲಿ ಪಿಂಟೋ ರವರು ಕೂಡಲೇ ಬಾಗಿಲು ಹಾಕಿ ಮನೆಯ ಒಳಗೆ ಓಡಿ ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾಡಾನೆಯು ಅವರಿಗೆ ಸೇರಿದ ಕಾರಿನ ಮೇಲೆ ದಾಳಿ ನಡೆಸಿ ಕಾರಿನ ಗಾಜನ್ನು ದಂತದಿAದ ಚುಚ್ಚಿ ಪುಡಿ ಮಾಡಿದೆ. ಅಲ್ಲದೇ ಕಾರಿಗೆ ಗುದ್ದಿ ಹಾನಿಗೊಳಿಸಿರುತ್ತದೆ. ಇದರಿಂದಾಗಿ ಕಾರಿನ ಮಾಲೀಕರಿಗೆ ನಷ್ಟ ಸಂಭವಿಸಿದೆ. ನಿಲ್ಲಿಸಿದ ಕಾರಿನ ಮೇಲೆ ದಾಳಿ ನಡೆಸಿರುವ ಘಟನೆಯ ದೃಶ್ಯಾವಳಿಗಳು ಲಿಸ್ಲಿ ಪಿಂಟೋರವರ ಮನೆಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡನೇ ಬಾರಿ ದಾಳಿ: ಲೆಸ್ಲಿ ಪಿಂಟೋ ರವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರೊಂದರ ಮೇಲೆ ಕಳೆದ ಒಂದು ತಿಂಗಳ ಹಿಂದೆ ಎರಡು ಕಾಡಾನೆಗಳು ಸೇರಿ ದಾಳಿ ನಡೆಸಿ ಕಾರನ್ನು ಜಖಂಗೊಳಿಸಿದೆ ಎಂದು ಕಾರಿನ ಮಾಲೀಕರು ತಿಳಿಸಿದ್ದಾರೆ. ಜಖಂಗೊAಡಿರುವ ಕಾರನ್ನು ದುರಸ್ತಿಪಡಿಸಲು ವರ್ಕ್ ಶಾಪ್‌ಗೆ ನೀಡಲಾಗಿದ್ದು, ಬೆಲೆ ಬಾಳುವ ಕಾರುಗಳ ಮೇಲೆ ಆಗಿಂದಾಗ್ಗೆ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಭಯದ ವಾತಾವರಣ ಮೂಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಮಗೆ ಸೇರಿದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಮನೆಯ ಅಂಗಳಕ್ಕೆ ಬಂದು ನೀರಿನ ಟ್ಯಾಂಕ್ ಹೂವಿನ ಕುಂಡಗಳನ್ನು ನಾಶಗೊಳಿಸುತ್ತಿವೆ. ರಾತ್ರಿ ಮನೆಯಿಂದ ಹೊರಕ್ಕೆ ಬರದಂತ ಭಯದ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾಡಾನೆಗಳ ಹಾವಳಿಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.
ಕಾರ್ಮಿಕರು ಕೆಲಸಕ್ಕೆ ಬರಲು ಭಯಪಡುತ್ತಿದ್ದಾರೆಂದರು. ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಮಾತನಾಡಿ, ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಓರ್ವ ಅರಣ್ಯ ರಕ್ಷಕನನ್ನು ಕಾಫಿ ತೋಟದಲ್ಲಿ ಕಾಡಾನೆಗಳ ಚಲನ ವಲನ ಗಮನಿಸಲು ಮಾಹಿತಿ ನೀಡಲು ತೋಟದೊಳಗೆ ನೋಡಿಕೊಳ್ಳಲು ನೇಮಿಸಲಾಗುವುದೆಂದರು. ಈಗಾಗಲೇ ಉಪಟಳ ನೀಡುತ್ತಿರುವ ಕಾಡಾನೆಗಳ ಪೈಕಿ ಪುಂಡಾನೆಯನ್ನು ಸೆರೆ ಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಶಾಲನಗರ ಮೀನುಕೊಲ್ಲಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ಸಿಬ್ಬಂದಿಗಳಾದ ರವಿ ಇನ್ನಿತರರು ಹಾಜರಿದ್ದರು.
-ಚಿತ್ರ ವರದಿ: ವಾಸು ಎ.ಎನ್.