ಮಡಿಕೇರಿ, ಏ. ೨೬; ಕೊಲೆ ಮಾಡಿ ಸಹಜ ಸಾವು ಎಂದು ನಂಬಿಸಿ ಮುಚ್ಚಿಹಾಕಲು ಯತ್ನಿಸಿದ ಪ್ರಕರಣದ ಸತ್ಯಾಂಶವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ತಾ. ೨೦ ರಂದು ಕುಶಾಲನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸುಂದರನಗರ ನಿವಾಸಿ ಸುರೇಶ್ ಸಾವನ್ನಪ್ಪಿರುವುದಾಗಿ ಆತನ ತಂಗಿ ಭವ್ಯ ಕುಟುಂಬಸ್ಥರುಗಳಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ನೋಡಲು ಬಂದ ಸುರೇಶ್ ಸ್ನೇಹಿತ ದೇಹದ ಮೇಲಿದ್ದ ಗುರುತುಗಳನ್ನು ಗಮನಿಸಿ ಅನುಮಾನಗೊಂಡು ಕುಶಾಲನಗರ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದರ ಆಧಾರದಲ್ಲಿ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಸಹಜ ಸಾವಲ್ಲ ಎಂಬ ನೈಜಾಂಶ ಹೊರಬಂದಿದೆ.
ಸುರೇಶ್‌ನ ಮನೆಯವರನ್ನು ತನಿಖೆ ನಡೆಸಿದಾಗ ಆತನ ತಂಗಿ ಭವ್ಯ, ಸಂಬAಧಿಕ ಹರೀಶ್ ಹಾಗೂ ಸ್ನೇಹಿತನಾದ ಮುಳ್ಳುಸೋಗೆ ಜನತಾ ಕಾಲೋನಿಯ ಮಹೇಶ್ ಸೇರಿಕೊಂಡು ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ನಿದ್ರೆಯಲ್ಲಿರುವಾಗಲೆ ಹರೀಶ್ ಹಾಗೂ ಮಹೇಶ್ ಇಬ್ಬರು ಸೇರಿ ಸುರೇಶ್‌ನನ್ನು ಉಸಿರುಗಟ್ಟಿಸಿ, ಕುತ್ತಿಗೆ ಅಮುಕಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೊಲೆ ಮಾಡಲು ಆಸ್ತಿ ವಿಚಾರ ಕಾರಣ ಎಂದು ಆರೋಪಿಗಳು ತಿಳಿಸಿದ್ದು, ಮೃತ ಸುರೇಶ್ ಅವಿವಾಹಿತನಾಗಿದ್ದು, ತಂಗಿ ಭವ್ಯ ಕೂಡ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ಅಣ್ಣ ಹಾಗೂ ತಾಯಿಯೊಂದಿಗೆ ನೆಲೆಸಿದ್ದಳು. ಸುರೇಶ್ ಮದ್ಯದÀ ದಾಸನಾಗಿದ್ದು, ಪದೇ ಪದೆ ಮನೆಯಲ್ಲಿ ನಿವೇಶನ ವಿಚಾರಕ್ಕೆ ಜಗಳವಾಗುತಿತ್ತು. ಘಟನೆಯ ಹಿಂದಿನ ದಿನ ಕೂಡ ನಿವೇಶನದ ವಿಚಾರಕ್ಕೆ ಮನೆಯಲ್ಲಿ ಭಾರಿ ಜಗಳ ನಡೆದಿತ್ತು. ಇದುವೇ ಕೊಲೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಅಯ್ಯಪ್ಪ, ಸೋಮವಾರಪೇಟೆ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ ಮಾರ್ಗದರ್ಶನ, ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಉಪನಿರೀಕ್ಷಕ ಚಂದ್ರಶೇಖರ್, ನವೀನ್, ಸಿಬ್ಬಂದಿಗಳಾದ ಅಜಿತ್, ಪ್ರವೀಣ್, ಮಂಜುನಾಥ್, ಶನಂತ್, ಚಾಲಕ ಯೋಗೇಶ್ ಇದ್ದರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪೊಲೀಸರ ಕಾರ್ಯಾಚರಣೆಗೆ ಪೊಲೀಸ್ ವರಿಷ್ಠಾಧಿಕಾರಿ ನಗದು ಬಹುಮಾನ ಘೋಷಿಸಿದ್ದಾರೆ.