ಮಡಿಕೇರಿ, ಏ. ೨೬: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಜಾಬ್ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊAಡು ಅಶಾಂತಿ ಸೃಷ್ಟಿಸುವುದರ ಜೊತೆಗೆ ಭ್ರಷ್ಟ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್‌ಕೊಡ್ಲಿಪೇಟೆ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಆಗ್ರಹಿಸಿ ಪಕ್ಷದಿಂದ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಅರಾಜಕತೆ ಸೃಷ್ಟಿಯಾಗಿದೆ. ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರದ ಪ್ರಮುಖ ಸಚಿವರುಗಳೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೂರಿದರು. ಸಚಿವ ಈಶ್ವರಪ್ಪ ಅವರು ಗುತ್ತಿಗೆದಾರರೊಬ್ಬರ ಆತ್ಮಹತ್ಯೆಗೆ ಕಾರಣವಾಗಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಗೃಹ ಸಚಿವ ಅರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಹಲವರು ಭ್ರಷ್ಟಾಚಾರದಲ್ಲಿ ಹಾಗೂ ಹಗರಣಗಳಲ್ಲಿ ತೊಡಗಿರುವುದು ಬಯಲಾಗಿದೆ. ಅಲ್ಪಸಂಖ್ಯಾತರ ಏಳಿಗೆಗಾಗಿ ಇದ್ದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಕೈಬಿಟ್ಟಿದೆ ಎಂದು ಅಪ್ಸರ್‌ಕೊಡ್ಲಿಪೇಟೆ ಆಪಾದನೆ ಮಾಡಿದರು.

ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಿಜಾಬ್ ನಿರಾಕರಣೆ, ಬಿಜೆಪಿ ಶಾಸಕರು, ಸಂಸದರು ಮತ್ತು ಸಂಘ ಪರಿವಾರದ ನಾಯಕರು ಮುಸ್ಲಿಂರನ್ನು ಗುರಿಪಡಿಸಿ ನೀಡುತ್ತಿರುವ ದ್ವೇಷ ಭಾಷಣಗಳು ಮತ್ತು ಹೇಳಿಕೆಗಳು ರಾಜ್ಯದಲ್ಲಿ ಶಾಂತಿ ಸೌಹಾರ್ದತೆಗೆ ಕೊಡಲಿಪೆಟ್ಟು ಹಾಕುತ್ತಿವೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟçಪತಿ ಆಡಳಿತ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಬೃಹತ್ ಜನಾಂದೋಲನ ಹಮ್ಮಿಕೊಂಡಿದೆ. ಪೋಸ್ಟರ್ ಅಭಿಯಾನ, ಟ್ವಿಟರ್ ಅಭಿಯಾನ, ಪೋಸ್ಟ್ಕಾರ್ಡ್ ಚಳುವಳಿ, ಸಾರ್ವಜನಿಕರಿಂದ ಸಹಿ ಸಂಗ್ರಹ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ ಕಲ್ಲು ಹೊಡೆಯುವ ಸಂಸ್ಕೃತಿ ಮುಸ್ಲಿಂರಲ್ಲಷ್ಟೆ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ ಅವರು ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದರು.

ಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಉಸ್ಮಾನ್, ಜಿಲ್ಲಾ ಸದಸ್ಯ ಅಬ್ದುಲ್‌ಅಡ್ಕರ್, ನಗರಸಭಾ ಸದಸ್ಯರುಗಳಾದ ಬಷೀರ್ ಅಹ್ಮದ್, ಮೇರಿವೇಗಸ್ ಉಪಸ್ಥಿತರಿದ್ದರು.