*ಸಿದ್ದಾಪುರ ಏ. ೨೬ : ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ರೀನಾ ಗಣಪತಿ ಅವರ ವಿರುದ್ಧ ಸ್ವಪಕ್ಷೀಯರೇ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ಪ್ರಹಸನವೊಂದು ನಡೆದಿದೆ.

ಒಟ್ಟು ೨೪ ಸದಸ್ಯ ಬಲದ ಗ್ರಾ.ಪಂ.ನಲ್ಲಿ ೧೫ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಇದೇ ಮೊದಲ ಬಾರಿಗೆ ಸಿದ್ದಾಪುರ ಪಂಚಾಯ್ತಿಯಲ್ಲಿ ಬಿಜೆಪಿ ಸದಸ್ಯರ ನೇತೃತ್ವದ ಆಡಳಿತ ಅಧಿಕಾರ ನಡೆಸುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಧ್ಯಕ್ಷರ ಕಾರ್ಯವೈಖರಿ ವಿರುದ್ಧ ಸ್ವಪಕ್ಷೀಯ ೯ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಇಂದು ಸದಸ್ಯರು ರೀನಾ ಗಣಪತಿ ವಿರುದ್ಧ ಅವಿಶ್ವಾಸ ಮಂಡಿಸಲು ಸಹಿ ಸಹಿತ ಮುಂದಾದರು.

ಈ ವಿಚಾರ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯರಿಗೆ ತಿಳಿದು ಸ್ಥಳಕ್ಕೆ ಆಗಮಿಸಿದರು. ಎಸ್‌ಎನ್‌ಡಿಪಿ ಹಾಲ್‌ನಲ್ಲಿ ಅಧ್ಯಕ್ಷರ ಸಹಿತ ಬಿಜೆಪಿ ಸದಸ್ಯರ ಸಭೆ ನಡೆಸಿದ ಅವರು ೯ ಮಂದಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ರೀತಿಯ ಅಸಮಾಧಾನವಿದ್ದರೂ ಪಕ್ಷದೊಳಗೆ ಚರ್ಚಿಸಿ ಸರಿ ಮಾಡಿಕೊಳ್ಳಬೇಕು. ಇಲ್ಲಿಯವರೆಗೆ ಮುಂದುವರಿಯಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಅಧ್ಯಕ್ಷರ ಅಧಿಕಾರವಧಿ ತಲಾ ಎರಡೂವರೆ ವರ್ಷಗಳಿಗೆ ಮೀಸಲಾಗಿದೆ. ಈ ಅವಧಿ ಮುಗಿದ ನಂತರ ನೂತನ ಅಧ್ಯಕ್ಷರ ಕುರಿತು ಚಿಂತಿಸೋಣವೆAದು ಸಲಹೆ ನೀಡಿದರು. ಶಾಸಕರ ಮಾತಿಗೆ ಮಣಿದ ೯ ಸದಸ್ಯರು ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಕೊನೆಗೂ ಅಸಮಾಧಾನ ಶಮನ ಮಾಡುವಲ್ಲಿ ಶಾಸಕರು ಯಶಸ್ವಿಯಾದರು.

ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಹಾಗೂ ಬಿಜೆಪಿ ಉಪಾಧ್ಯಕ್ಷ ವಿ.ಕೆ.ಲೋಕೇಶ್ ಈ ಸಂದರ್ಭ ಹಾಜರಿದ್ದರು.

- ಅಂಚೆಮನೆ ಸುಧಿ