ಮಡಿಕೇರಿ, ಏ. ೨೫: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಭವನ ಸಮಿತಿ ಹಾಗೂ ಅಶೋಕಪುರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಸಮಿತಿಯ ಸಹಯೋಗದೊಂದಿಗೆ ಆಚರಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನಪೂರ್ಣೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎಂ. ಜಯರಾಂ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ನಗರಸಭಾಧ್ಯಕ್ಷ ಹಾಗೂ ಅಂಬೇಡ್ಕರ್ ಭವನ ಸಮಿತಿ ಅಧ್ಯಕ್ಷ ನಂದಕುಮಾರ್ ಆಗಮಿಸಿ, ಮಾತನಾಡಿ, ಅಂಬೇಡ್ಕರ್ ಅವರ ದೂರ ದೃಷ್ಟಿತ್ವ, ಚಿಂತನೆಗಳು ಹಾಗೂ ಸಾಧನೆ ಸದಾ ಪ್ರಸ್ತುತ ಹಾಗೂ ಅವರ ಆದರ್ಶ, ವ್ಯಕ್ತಿತ್ವ ನಮಗೆ ಮಾರ್ಗದರ್ಶಕ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಮಹಿಳಾ ಕಾಲೇಜಿನ ಉಪನ್ಯಾಸಕಿ ನಿರ್ಮಲಾ, ಅಂಬೇಡ್ಕರ್ ಅವರ ಸಾಧನೆ ಒಂದು ಸಮಾಜಕ್ಕೆ ಸೀಮಿತವಲ್ಲ. ಮುಖ್ಯವಾಗಿ ದೇಶದ ಮಹಿಳೆಯರಿಗೆ ಗೌರವಯುತ ಸ್ಥಾನ ದೊರಕಿಸಿ ಕೊಡುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದರು. ನಗರಸಭಾ ಸದಸ್ಯೆ ಶಾರದಾ ನಾಗರಾಜು ಉಪಸ್ಥಿತರಿದ್ದರು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಜಯರಾಂ ಅವರು, ಇಂತಹ ಅರ್ಥಪೂರ್ಣ ಆಚರಣೆಗೆ ಕೈಜೋಡಿಸಿದ ಸಮಿತಿಯ ಕಾರ್ಯ ಶ್ಲಾಘನೀಯವೆಂದರು. ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧಾ ಚಟುವಟಿಕೆಗಳು ನಡೆಯಿತು.
ವೇದಿಕೆಯಲ್ಲಿ ಅಂಬೇಡ್ಕರ್ ಭವನ ಸಮಿತಿ ಕಾರ್ಯದರ್ಶಿ ಸಿದ್ಧರಾಜು, ದೇವಾಲಯ ಸಮಿತಿ ಕಾರ್ಯದರ್ಶಿ ಹೆಚ್.ಆರ್. ವೆಂಕಪ್ಪ, ಹಿರಿಯ ಸದಸ್ಯರಾದ ಹೆಚ್.ಟಿ. ಶ್ಯಾಂ, ಹೆಚ್.ಆರ್. ಮುತ್ತಪ್ಪ ಉಪಸ್ಥಿತರಿದ್ದರು. ಕಾರ್ಯದರ್ಶಿ ವೆಂಕಪ್ಪ ಸ್ವಾಗತಿಸಿ, ಶಿಕ್ಷಕಿ ವಿದ್ಯಾ ಪ್ರದೀಪ್ ವಂದಿಸಿದರು. ಸದಸ್ಯ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹೆಚ್.ಎಲ್. ರಮೇಶ್ ನಡೆಸಿಕೊಟ್ಟರು.
ಈ ಸಂದರ್ಭ ಪೊಲೀಸ್ ಇಲಾಖೆಯ ಉತ್ತಮ ಸೇವೆಗೆ ಫೀ.ಮಾ. ಕಾರ್ಯಪ್ಪ ಟ್ರೋಫಿಗೆ ಭಾಜನರಾದ ಸದಸ್ಯ ಪಿ.ಎನ್. ನಿರಂಜನ್ ಅವರನ್ನು ಸನ್ಮಾನಿಸಲಾಯಿತು.ಗೋಣಿಕೊಪ್ಪಲು : ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ಪೊನ್ನಂಪೇಟೆ ಶಿವ ಕಾಲೋನಿಯ ಸಮುದಾಯ ಭವನದಲ್ಲಿ ಜರುಗಿತು. ಸಮಾಜ ಸೇವಕಿ ಹೆಚ್.ಎನ್. ಮಂಜುಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋಣಿಕೊಪ್ಪ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುಬ್ಬಯ್ಯ ಮಾತನಾಡಿ, ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ ಬಿ.ಆರ್. ಅಂಬೇಡ್ಕರ್ ವಿಶ್ವದಲ್ಲಿಯೇ ವಿಶ್ವಮಾನವರಾಗಿ ಹೆಸರು ಮಾಡಿದವರು. ಇವರ ಜಯಂತಿ ಕಾರ್ಯಕ್ರಮವು ಪ್ರತಿ ಮನೆಗಳಲ್ಲಿಯೂ ನಡೆಯಬೇಕು, ವಿದೇಶಗಳಲ್ಲಿ ಶಿಕ್ಷಣ ಪಡೆದು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚಿನ ವಿದ್ಯೆಯನ್ನು ಪಡೆದು ಜ್ಞಾನಿಯಾದರು. ಸಂವಿಧಾನ ಇವರ ಅದರ್ಶ ಗುಣಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು. ಸಮಾಜ ಸೇವಕಿ ಪಡಿಕಲ್ ಕುಸುಮಾವತಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ರೈತ ಸಂಘದ ಕಳ್ಳಿರ ಹರೀಶ್, ಸಮಾಜ ಸೇವಕಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಪ್ರಮುಖರಾದ ಮೂರ್ನಾಡು ಹರೀಶ್, ಪುಳಿಂಜನ ಪೂವಯ್ಯ, ಸಂತೋಷ್, ಉಪನ್ಯಾಸಕಿ ಗೀತಾನಾಯ್ಡು, ಬಲಿಜ ಸಮಾಜ ಜಿಲ್ಲಾಧ್ಯಕ್ಷ ಟಿ.ಎಲ್. ಶ್ರೀನಿವಾಸ್, ದೇವಮ್ಮ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಥಳೀಯ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.ಶನಿವಾರಸಂತೆ : ಕೊಡ್ಲಿಪೇಟೆ ಸಮೀಪದ ನಿಲುವಾಗಿಲು ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಶತಾಯುಷಿ ನಿಂಗಯ್ಯ ಅವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಸಂ.ಸ.ದ ಜಿಲ್ಲಾ ಸಂಚಾಲಕ ದಿವಾಕರ್ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಅಧ್ಯಕ್ಷ ದೀಪಕ್, ಕೊಡ್ಲಿಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವಿಂದರಾಜು ಭಾಗವಹಿಸಿ ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಬಾಲಿಕಾ ಪದವಿಪೂರ್ವ ಕಾಲೇಜಿನ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಪ್ರಪಂಚದ ಪ್ರಸಿದ್ಧ ಕೇಂಬ್ರಿಡ್ಜ್, ಕೊಲಂಬಿಯಾ, ಆಕ್ಸ್ ಪರ್ಡ್ ವಿಶ್ವವಿದ್ಯಾನಿಲಯಗಳು ಈ ವಿಶ್ವ ವಿಜ್ಞಾನಿಯ ಹೆಸರನ್ನು ಅವರ ಕಾನೂನು ವಿಭಾಗದ ಅಧ್ಯಯನ ಕೇಂದ್ರಗಳಿಗೆ ಇಟ್ಟಿದ್ದಾರೆ ಎಂದು ತಿಳಿಸಿದರು. ಅವರ ಹುಟ್ಟಿದ ದಿನವನ್ನು ಆಚರಿಸುವುದಕ್ಕಿಂತ ಹೆಚ್ಚಾಗಿ ಅವರ ಜೀವನವನ್ನು ಅನುಸರಿಸುವುದು ಮುಖ್ಯ ಎಂದು ತಿಳಿಸಿದರು.
ಸಮಾರಂಭದ ವೇದಿಕೆಯಲ್ಲಿ ಶಿಕ್ಷಕರಾದ ಸತೀಶ್, ಕಿರಣ್, ಬೆಂಗಳೂರಿನ ಡಿಆರ್‌ಡಿಓ ತಾಂತ್ರಿಕ ಮುಖ್ಯಸ್ಥ, ಅರಣ್ಯ ಇಲಾಖೆಯ ಚಂದ್ರು ಇದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.