ವೀರಾಜಪೇಟೆ, ಏ. ೨೬: ಜೈಲುವಾಸ ಅನುಭವಿಸಿ ಬಿಡುಗಡೆಯಾದರು ಬುದ್ಧಿ ಕಲಿಯದೆ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ವ್ಯಕ್ತಿ ಮತ್ತೇ ಕಳ್ಳತನ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ನಗರದ ಅರಸು ನಗರದ ನಿವಾಸಿ ಕಾರ್ತಿಕ್ (೩೦) ದೇಗುಲದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿ. ಬಂಧಿತ ಕಾರ್ತಿಕ್ ಕದನೂರು ವ್ಯಾಪ್ತಿಯ ದೇಗುಲವೊಂದರ ಭಂಡಾರ ಒಡೆದು ಹಣ ಕಳ್ಳತನ ಮಾಡಿರುವ ಪ್ರಕರಣದಲ್ಲಿ ಸೆರೆಮನೆವಾಸ ಅನುಭವಿಸಿ ಒಂದು ವಾರದ ಹಿಂದಷ್ಟೆ ಬಿಡುಗಡೆಯಾಗಿದ್ದ. ಇದರಿಂದ ಬುದ್ಧಿ ಕಲಿಯದ ಕಾರ್ತಿಕ್ ಭಾನುವಾರ ಅರಸುನಗರದ ಮುತ್ತಪ್ಪನ್ ದೇವಾಲಯದ ಹುಂಡಿ ಕಳವು ಮಾಡಿದ್ದಾನೆ. ಮುಂಜಾನೆ ಸಿಬ್ಬಂದಿಗಳು ದೇಗುಲಕ್ಕೆ ಆಗಮಿಸಿದ ಸಂದರ್ಭ ಹುಂಡಿ ಒಡೆದು ಹಣ ಕಳ್ಳತನವಾಗಿರುವುದು ಗೋಚರಿಸಿದೆ. ಅನುಮಾನಗೊಂಡ ಸ್ಥಳೀಯರು ಕಾರ್ತಿಕ್ ಕಳ್ಳತನ ಮಾಡಿದ್ದಾನೆ ಎಂದು ಅಂದಾಜಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಅರಸು ನಗರದ ಪ್ರದೀಪ್ ಅವರು ನೀಡಿರುವ ದೂರಿನ ಅನ್ವಯ ವೀರಾಜಪೇಟೆ ನಗರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಕಾರ್ತಿಕ್ನನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಕಾರ್ತಿಕ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. -ಕಿಶೋರ್ ಶೆಟ್ಟಿ