ಮಡಿಕೇರಿ, ಏ. ೨೫ : ಮಡಿಕೇರಿ ಆಕಾಶವಾಣಿ ಕೇಂದ್ರದ ಕಾರ್ಯವೈಖರಿ ವಿರುದ್ಧ ಆಮ್ ಆದ್ಮಿ ಪಾರ್ಟಿ ಹಾಗೂ ಅಲ್ಲಾರಂಡ ರಂಗ ಚಾವಡಿ ಸಂಘಟನೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಆಕಾಶವಾಣಿ ಕೇಂದ್ರದ ಎದುರು ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರಮುಖರು ಜನಾಭಿಪ್ರಾಯಕ್ಕೆ ಮನ್ನಣೆ ನೀಡುವಂತೆ ಒತ್ತಾಯಿಸಿದರು.

ಆಕಾಶವಾಣಿ ಮೂಲಕ ನಿಧನ ಸುದ್ದಿಯನ್ನು ಬೆಳಗ್ಗೆ ಮಾತ್ರ ಪ್ರಸಾರ ಮಾಡಲಾಗುತ್ತಿದ್ದು, ಈ ಹಿಂದಿನAತೆ ಸಂಜೆ ಕೂಡ ಪ್ರಸಾರ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೊಡಗಿನ ಕೇಳುಗರಿಗೆ ಆಕಾಶವಾಣಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಪ್ರಸಾರವಾಗುತ್ತಿದ್ದ ಕಾರ್ಯಕ್ರಮಕ್ಕೆ ಕತ್ತರಿ ಹಾಕಿರುವ ಉದ್ದೇಶವೇನೆಂದು ಪ್ರಶ್ನಿಸಿದರು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರು ಕೇಂದ್ರ ಕಚೇರಿಯ ಆದೇಶದಂತೆ ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ. ಹಿಂದಿನAತೆ ಸಂಜೆ ಕೂಡ ನಿಧನ ಸುದ್ದಿ ಪ್ರಸಾರ ಮಾಡಲು ಸಾಧ್ಯವಿಲ್ಲ, ತಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಆಮ್ ಆದ್ಮಿ ಪಾರ್ಟಿಯ ಪ್ರಮುಖರು ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಪಕ್ಷದ ಕೊಡಗು ಉಸ್ತುವಾರಿ ಎಸ್.ಬಿ.ಉದಯ್ ಕುಮಾರ್, ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್, ಜಿಲ್ಲಾ ಸಂಚಾಲಕ ಹೆಚ್.ಜಿ.ಬಾಲಸುಬ್ರಮಣ್ಯ, ಜಿ.ಬಿ.ಪೃಥ್ವಿ, ವಕೀಲರಾದ ಬಾಲಸುಬ್ರಮಣ್ಯ ಕಂಜರ್ಪಣೆ, ಅಬೂಬಕ್ಕರ್, ಅಲ್ಲಾರಂಡ ರಂಗ ಚಾವಡಿಯ ಸಂಚಾಲಕ ಅಲ್ಲಾರಂಡ ವಿಠಲ ನಂಜಪ್ಪ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.