ಮಡಿಕೇರಿ, ಏ. ೨೫: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಮೂರ್ನಾಡು ಎಸ್.ಆರ್.ಎಸ್. ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ೧೮ನೇ ವರ್ಷದ ಮುಸ್ಲಿಂ ಕಪ್ ಮೇ ೨೩ ರಿಂದ ೨೯ ರ ತನಕ ಮೂರ್ನಾಡು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಉಭಯ ಸಂಘಟನೆಗಳು ಮಾಹಿತಿ ನೀಡಿವೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ಎಸ್. ಕ್ರಿಕೆಟರ್ಸ್ ಅಧ್ಯಕ್ಷ ಜಾಷೀರ್, ಈ ಬಾರಿ ಎಸ್.ಆರ್.ಎಸ್. ಕ್ರಿಕೆಟರ್ಸ್ ಮುಸ್ಲಿಂ ಕಪ್‌ನ ಆತಿಥ್ಯ ವಹಿಸಿದೆ. ಅದ್ಧೂರಿಯಾಗಿ ಪಂದ್ಯಾವಳಿ ನಡೆಸುವ ಚಿಂತನೆ ಇದೆ. ಕಳೆದ ಬಾರಿ ೧೧೦ ತಂಡಗಳು ಭಾಗವಹಿಸಿದ್ದವು. ಈ ಬಾರಿ ೧೩೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮುಸ್ಲಿಂ ಜಮಾಅತ್ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿವೆ.
ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೨೫ ಸಾವಿರ ನಗದು ಟ್ರೋಫಿ, ತೃತೀಯ ಸ್ಥಾನ ಗಳಿಸುವ ತಂಡಕ್ಕೆ ರೂ. ೧೫ ಸಾವಿರ ಟ್ರೋಫಿ, ನಾಲ್ಕನೇ ಸ್ಥಾನ ಗಳಿಸುವ ತಂಡಕ್ಕೆ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ ವಿತರಿಸಲಾಗುವುದು. ಮೇ ೧೦ ರ ತನಕ ಪಂದ್ಯಾವಳಿಗೆ ನೋಂದಾವಣಿಗೆ ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ ೭೨೫೯೬೩೭೨೮೮, ೯೬೮೬೯೬೦೨೮೮, ೭೮೪೬೮೦೫೨೧೯ ಸಂಖ್ಯೆಗಳನ್ನು ಸಂಪರ್ಕಿಸುವAತೆ ಮಾಹಿತಿ ನೀಡಿದರು.
ಮೂರ್ನಾಡು ಮುಸ್ಲಿಂ ಜಮಾತ್ ಅಧ್ಯಕ್ಷ ಮಜೀದ್ ಉದ್ಘಾಟನೆ ಹಾಗೂ ಮುಸ್ಲಿಂ ಕಪ್ ಸಂಸ್ಥಾಪಕ ಅಬ್ದುಲ್ ರಶೀದ್ ಧ್ವಜಾರೋಹಣದೊಂದಿಗೆ ಪಂದ್ಯಾಟಕ್ಕೆ ಚಾಲನೆ ದೊರೆಯಲಿದೆ. ಪಂದ್ಯಾಟಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹ್ಯಾರಿಸ್ ನಲಪಾಡ್ ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಇದೇ ಸಂದರ್ಭ ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಕ್ರಿಕೆಟ್ ಕಪ್ ಸಂಸ್ಥಾಪಕ ಅಬ್ದುಲ್ ರಶೀದ್ ಮಾತನಾಡಿ, ಹಬ್ಬದ ರೀತಿಯಲ್ಲಿ ಈ ಬಾರಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಇದು ವೇದಿಕೆಯಾಗಿದೆ. ಸರಕಾರ ಮುಸ್ಲಿಂ ಕಪ್ ಗೆ ಅನುದಾನ ನೀಡುವಂತೆ ಈ ಸಂದರ್ಭ ಮನವಿ ಮಾಡಿದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಖಾದರ್, ಸದಸ್ಯ ಹ್ಯಾರಿಸ್, ಎಸ್.ಆರ್.ಎಸ್. ಕ್ರಿಕೆಟರ್ಸ್ ಕಾರ್ಯದರ್ಶಿ ಇಸ್ಮಾಯಿಲ್, ಉಪಾಧ್ಯಕ್ಷ ಹರ್ಷಿದ್ ಇದ್ದರು.