ಮಡಿಕೇರಿ, ಏ. ೨೫: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಲು ಯಾವ ಅಭ್ಯರ್ಥಿಯನ್ನು ಕೂಡ ಆಯ್ಕೆ ಮಾಡಿಲ್ಲ. ಜೆಡಿಎಸ್ನಲ್ಲಿ “ಬ್ಯಾನರ್, ಕಟೌಟ್” ರಾಜಕೀಯ ನಡೆಯಲ್ಲ ಎಂದು ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸೂದನ ಎಸ್. ಈರಪ್ಪ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ವರಿಷ್ಠರು ಯಾರನ್ನೂ ಅಭ್ಯರ್ಥಿಯನ್ನಾಗಿ ಘೋಷಿಸಿಲ್ಲ ಮತ್ತು ಆಯ್ಕೆಯ ಬಗ್ಗೆಯೂ ನಿರ್ಧಾರ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಪಕ್ಷದ ಸಾಕಷ್ಟು ನಿಷ್ಠಾವಂತ ನಾಯಕರು ಹಾಗೂ ಕಾರ್ಯಕರ್ತರಿದ್ದಾರೆ. ಇವರುಗಳನ್ನೆಲ್ಲ ವಿಶ್ವಾಸಕ್ಕೆ ತೆಗೆದುಗೊಂಡು ಚರ್ಚಿಸಿದ ನಂತರ ಕಾರ್ಯಕರ್ತರೇ ಅಭ್ಯರ್ಥಿಯನ್ನು ಅಂತಿಮವಾಗಿ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿಕಾರ ಪಡೆಯುವುದಕ್ಕಾಗಿ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಮಾತ್ರ ಪಕ್ಷಕ್ಕೆ ಬರುವವರನ್ನು ಜೆಡಿಎಸ್ನ ಸಾಮಾನ್ಯ ಕಾರ್ಯಕರ್ತರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಕೊಡಗಿನ ಮಟ್ಟಿಗೆ ಪಕ್ಷದ ಕಾರ್ಯಕರ್ತರೇ ವರಿಷ್ಠರು. ಸಮಸ್ತ ಕಾರ್ಯಕರ್ತರ ನಿರ್ಧಾರವನ್ನು ವರಿಷ್ಠರು ಒಪ್ಪುತ್ತಾರೆ. ಇಲ್ಲವಾದಲ್ಲಿ ತಂತ್ರ, ಕುತಂತ್ರಕ್ಕೆ ತಿರುಗೇಟು ನೀಡಲು ಕಾರ್ಯಕರ್ತರು ಶಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.