ಸೋಮವಾರಪೇಟೆ, ಏ. ೨೩: ಎರಡು ವರ್ಷಗಳಿಗೊಮ್ಮೆ ನಡೆಯುವ ಚೌಡ್ಲು ಗ್ರಾಮದ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಸಂಭ್ರಮ-ಸಡಗರದಿAದ ಜರುಗಿತು.

ಹೆಣ್ಣು-ಗಂಡು ವೇಷಧಾರಿಗಳು ಪ್ರಮುಖ ಆಕರ್ಷಣೆಯಾಗಿರುವ ಚೌಡ್ಲು ಸುಗ್ಗಿ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು, ಚೌಡ್ಲು ಗ್ರಾಮದ ವರ ಹಾಗೂ ನಗರೂರು ಗ್ರಾಮದ ವಧು (ಹೆಣ್ಣು ವೇಷಧಾರಿ ಗಂಡು) ಸುಗ್ಗಿ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿಸಿ, ಸಬ್ಬಮ್ಮ ದೇವಾಲಯದ ಎದುರು ಭಾಗದಲ್ಲಿ ವಿವಿಧ ಧಾನ್ಯಗಳನ್ನು ಬಿತ್ತನೆ ಮಾಡುವ ಮೂಲಕ ಹೊನ್ನಾರು ಸಂಪ್ರದಾಯ ನೆರವೇರಿಸಿದರು.

ಹೊನ್ನಾರು ಬಿತ್ತುವ ಹೆಣ್ಣು ವೇಷಧಾರಿಯಾಗಿದ್ದ ನಗರೂರು ಗ್ರಾಮದ ಕುಮಾರ ಹಾಗೂ ವರನಾದ ಚೌಡ್ಲು ಗ್ರಾಮದ ಚಂದ್ರಶೇಖರ್ ಅವರುಗಳು ಸುಗ್ಗಿ ಉತ್ಸವದ ಅನೂಚಾನ ಸಂಪ್ರದಾಯಗಳನ್ನು ನೆರವೇರಿಸಿದರು. ಹಬ್ಬದ ಅಂಗವಾಗಿ ಸುಗ್ಗಿಕಟ್ಟೆ ಹಾಗೂ ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸ ಲಾಗಿತ್ತು. ಹೊರಭಾಗದಲ್ಲಿ ನೆಲೆಸಿ ದ್ದವರು ಗ್ರಾಮಕ್ಕೆ ಆಗಮಿಸಿದ್ದರಿಂದ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು.

ಗ್ರಾಮದ ಪ್ರಮುಖರು ಸುಗ್ಗಿ ಬನದಲ್ಲಿರುವ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಚೌಡ್ಲು, ನಗರೂರು, ಕಿಬ್ಬೆಟ್ಟ, ಕರ್ಕಳ್ಳಿ ಭಾಗದ ಗ್ರಾಮಸ್ಥರು ಭಾಗಿಯಾಗಿದ್ದರು.

ಈ ಸಂದರ್ಭ ಸುಗ್ಗಿ ಉತ್ಸವ ಸಮಿತಿ ಅಧ್ಯಕ್ಷ ಚೌಡ್ಲು ದಿನೇಶ್, ಉಪಾಧ್ಯಕ್ಷ ಶಶಿ, ಕಾರ್ಯದರ್ಶಿ ಮಹೇಶ್ ತಿಮ್ಮಯ್ಯ, ಕಿಬ್ಬೆಟ್ಟ ಗ್ರಾಮಾಧ್ಯಕ್ಷ ಮನಿಲ್, ನಗರೂರು ಗ್ರಾಮಾಧ್ಯಕ್ಷ ಕೆ.ಎ. ಪ್ರಕಾಶ್, ಕರ್ಕಳ್ಳಿ ಗ್ರಾಮಾಧ್ಯಕ್ಷ ಸುಧಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.