ಮುಳ್ಳೂರು, ಏ. ೨೩: ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಸಮಿತಿ ಕೊಡ್ಲಿಪೇಟೆ ಶಾಖೆ ವತಿಯಿಂದ ತಾ. ೨೫ ರಂದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೧ನೇ ಜನ್ಮ ದಿನಾಚರಣೆ ಅದ್ಧೂರಿ ಕಾರ್ಯಕ್ರಮ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ನಡೆಯಲಿದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಶನಿವಾರಸಂತೆ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಲ್ಲಾ ಜಾತಿ ಧರ್ಮದವರನ್ನು ಸೇರಿಸಿಕೊಂಡು ಅದ್ಧೂರಿಯಾಗಿ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು. ಅಂಬೇಡ್ಕರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಚಾರವಾದಿ ಪ್ರಭುಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ, ವಿವಿಧ ಪಕ್ಷದ ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಸಮಿತಿ ಖಜಾಂಚಿ ವಸಂತ್ ಮಾತನಾಡಿ, ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮೈಸೂರಿನ ಡಾ. ಜ್ಞಾನಪ್ರಕಾಶ್ ಸ್ವಾಮೀಜಿ ಭಾಗವಹಿಸಲಿದ್ದು, ಅಂದು ಬೆಳಿಗ್ಗೆ ದೊಡ್ಡಕುಂದ ಬಸ್ ನಿಲ್ದಾಣದಿಂದ ಕೊಡ್ಲಿಪೇಟೆಯ ವಿವಿಧ ಪ್ರಮುಖ ಬೀದಿಗಳಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಸ್ತಬ್ಧಚಿತ್ರ ಮೆರವಣಿಗೆ ನಡೆಯಲಿದೆ. ಜಿಲ್ಲೆ ಸೇರಿದಂತೆ ಹಾಸನ ಜಿಲ್ಲಾ ಭಾಗಗಳಿಂದ ಅಂದಾಜು ೨ ಸಾವಿರಕ್ಕಿಂತ ಹೆಚ್ಚಿನ ಅಂಬೇಡ್ಕರ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.