‘ಕೊಡಗಿನವರೇ ಮಂತ್ರಿ ಆಗಬೇಕು. ಇಲ್ಲಿಯವರೆ ಮಂತ್ರಿ ಆದರೆ ಕೊಡಗಿನ ಸಮಸ್ಯೆ ಶೇ.೧೦೦ರಷ್ಟು ಇತ್ಯರ್ಥ ಆಗುತ್ತೆ. ಈ ಬಗ್ಗೆ ಪಕ್ಷ ಹಾಗೂ ಸಿ.ಎಂ. ಜೊತೆಯೂ ಮಾತಾಡಿದ್ದೇನೆ. ಮುಂದೆ ಏನು ಬದಲಾವಣೆ ಆಗುತ್ತದೊ ಅದ್ರಲ್ಲಿ ಕೊಡಗಿನ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ವೀಣಾ ಅಚ್ಚಯ್ಯ ಅವರು ರಾಜ್ಯ ಅರಣ್ಯ ಸಚಿವ ಹಾಗೂ ಕಂದಾಯ ಸಚಿವರನ್ನು ಕೊಡಗಿಗೆ ಕಳುಹಿಸಿಕೊಡಿ, ಇಲ್ಲಿನ ಸಮಸ್ಯೆ ಅವರಿಗೂ ಗೊತ್ತಾಗಲಿ ಎಂದು ಮನವಿ ಮಾಡಿದ್ದಾರೆ. ಇಲ್ಲಿಂದಲೇ ಮಂತ್ರಿ ಆದರೆ ಮಾತ್ರ ಸಮಸ್ಯೆ ಬಗೆಹರಿಯುತ್ತೆ. ಕಂದಾಯ ಹಾಗೂ ಅರಣ್ಯ ಸಚಿವರಿಗೆ ನಾನೇ ಹೇಳಿದ್ದೇನೆ. ಶಾಸಕ ಅಪ್ಪಚ್ಚು ರಂಜನ್ ಅವರು ಸದನದಲ್ಲಿ ಹುಲಿ ಧಾಳಿ ಪ್ರಸ್ತಾಪಿಸುವ ಸಂದರ್ಭ ಅರಣ್ಯ ಇಲಾಖೆ ಹುಲಿ ಹಿಡಿಯಲಿ; ಇಲ್ಲವಾದ್ರೆ ನಾವೇ ಗುಂಡು ಹೊಡೆಯುತ್ತೇವೆ ಎಂದಿದ್ದಾರೆ. ಇಂತಹ ಪ್ರಸ್ತಾಪಗಳು ಸದನದಲ್ಲಿ ಬರಬಾರದು. ಕೊಡಗಿಗೆ ಹೋಗಿ ಸಮಸ್ಯೆ ನೋಡ್ರಿ ಅಂತ ಅರಣ್ಯ ಹಾಗೂ ಕಂದಾಯ ಸಚಿವರಿಗೆ ನಾನೇ ಹೇಳಿದ್ದೇನೆ ಎಂದರು.
(ಮೊದಲ ಪುಟದಿಂದ) ‘ಕೊಡಗಿನ ಸಮಸ್ಯೆ ಬಗೆಹರಿಯಬೇಕಾದರೆ ಅಲ್ಲಿಯವರನ್ನೇ ಮಂತ್ರಿ ಮಾಡಿ ಅಂತ ಸಿ.ಎಂ.ಗೆ ಹೇಳಿದ್ದೇನೆ. ಮುಂದೆ ರಾಜ್ಯದಲ್ಲಿ ಏನ್ ಬದಲಾವಣೆ ಆಗುತ್ತೋ ಆವಾಗ ಕೊಡಗಿನ ಸಮಸ್ಯೆಯೂ ಬಗೆಹರಿಯುತ್ತೆ’ ಎಂದು ಸಹಕಾರ ಸಚಿವ ಸೋಮಶೇಖರ್ ಹೇಳಿದರು.
ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಸರ್ಕಾರದಲ್ಲಿ ಕಸರತ್ತು ನಡೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸಹಕಾರ ಸಚಿವರು ನೀಡಿದ ಈ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಕೊಡಗಿನ ಈರ್ವರು ಶಾಸಕರ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ? ಈರ್ವರಿಗೂ ಸಂಪುಟದಲ್ಲಿ ಅವಕಾಶ ಲಭಿಸಬಹುದೇ? ಎಂಬ ಚರ್ಚೆ ಮುನ್ನೆಲೆಗೆ ಬರುವಂತಾಗಿದೆ.