ಸೋಮವಾರಪೇಟೆ, ಏ.೨೩: ಸಮೀಪದ ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿAದ ನೆರವೇರಿತು.
ಗ್ರಾಮಸ್ಥರು ಸೇರಿದಂತೆ ನೂರಾರು ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸುಗ್ಗಿ ಉತ್ಸವ ನಡೆದಿರಲಿಲ್ಲ. ಪ್ರಸಕ್ತ ವರ್ಷ ಕಟ್ಟುನಿಟ್ಟಿನ ವ್ರತದೊಂದಿಗೆ ಸಕಲ ಪೂಜೆ ಸಲ್ಲಿಸಲಾಯಿತು. ಇಷ್ಟಾರ್ಥಕ್ಕಾಗಿ ಹರಕೆ ಹೊತ್ತ ಭಕ್ತಾದಿಗಳು ಹರಕೆ ತೀರಿಸಿದರು.
ನಿನ್ನೆ ರಾತ್ರಿ ದೇವಿಗೆ ಎಡೆ ಅರ್ಪಿಸಲಾಯಿತು. ಗ್ರಾಮದ ಸಮೃದ್ಧಿ, ಜನರಿಗೆ ರೋಗರುಜಿನ ಬಾಧಿಸದಂತೆ, ಉತ್ತಮ ಮಳೆ ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಗ್ರಾಮಸ್ಥರಿಗೆ ದೇವರ ಪ್ರಸಾದ ಹಂಚಲಾಯಿತು.
ಬೆಳಿಗ್ಗೆ ಬಸವೇಶ್ವರ ದೇವರಿಗೆ ಗಂಗಸ್ನಾನ ನೆರವೇರಿಸಿ, ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ, ಸುಗ್ಗಿ ಬನದಲ್ಲಿ ಪ್ರದಕ್ಷಿಣೆ ಯೊಂದಿಗೆ ಪೂಜೆ ನೆರವೇರಿಸ ಲಾಯಿತು. ತಾ.೨೫ರಂದು ಸೋಮವಾರ ಹಗಲು ಸುಗ್ಗಿ ನಡೆಯಲಿದ್ದು, ಮಂಗಳವಾರ ಮಾರಿಯಮ್ಮನ ಪೂಜೆ ನಡೆದು, ಸುಗ್ಗಿ ಉತ್ಸವ ಪೂರ್ಣಗೊಂಡು ನಂತರ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಲಿದ್ದಾರೆ ಎಂದು ಸುಗ್ಗಿ ಉತ್ಸವ ಸಮಿತಿ ಅಧ್ಯಕ್ಷ ವೈ.ಡಿ, ಬೆಳ್ಳಿಯಪ್ಪ ಹೇಳಿದರು. ದೇವರ ಒಡೆಕಾರರಾದ ನಿಂಗಪ್ಪ, ಕಾರ್ತಿಕ್, ನಾಗೇಶ್, ನಾಗರಾಜು, ಜಯರಾಮ್ ಮತ್ತಿತರರು ಪೂಜಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.